ಮಡಿಕೇರಿ, ಡಿ. 30: ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸರಿಗಾಗಿ ಮೂರು ದಿನಗಳ ಕಾಲ ಆಯೋಜಿಸಲ್ಪಟ್ಟಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಇಂದು ಸಂಭ್ರಮದ ತೆರೆ ಬಿತ್ತು.ತಾ. 28 ರಿಂದ ಆರಂಭಗೊಂಡಿದ್ದ ಕ್ರೀಡಾಕೂಟದಲ್ಲಿ ಮಹಿಳೆಯರು, ಪುರುಷರು, ಅಧಿಕಾರಿಗಳು, ಸಿಬ್ಬಂದಿ ಎಂಬ ಭೇದವಿಲ್ಲದೆ ಆರಕ್ಷಕರು ಒಟ್ಟಾಗಿ ಮಿಂದೆದ್ದರು. ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಓಟ, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಕ್ರಿಕೆಟ್, ಕಬಡ್ಡಿ ಮತ್ತಿತರ ಹತ್ತು ಹಲವಾರು ಸ್ಪರ್ಧೆಗಳು ನಡೆದವು.

ಪ್ರತಿ ಪಂದ್ಯಾಟದಲ್ಲಿ ಶಿಳ್ಳೆ, ಚಪ್ಪಾಳೆಯೊಂದಿಗೆ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದ ಖಾಕಿ ಪಡೆ ನಿತ್ಯದ ಒತ್ತಡದ ಬದುಕನ್ನು ಬದಿಗಿಟ್ಟು ಮನೊಲ್ಲಾಸದಿಂದ ಸಂಭ್ರಮಿಸಿತು. ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಸ್ಪರ್ಧಿಗಳಿಗೆ ವೈಯಕ್ತಿಕ ನಗದು ಬಹುಮಾನಗಳನ್ನು

(ಮೊದಲ ಪುಟದಿಂದ) ಘೋಷಿಸುವ ಮೂಲಕ ಅಧಿಕಾರಿ ವರ್ಗ ಕ್ರೀಡಾಳುಗಳಿಗೆ ಪ್ರೋತ್ಸಾಹಿಸುತ್ತಿದ್ದುದು ವಿಶೇಷವಾಗಿತ್ತು.

ಆಟಗಳ ಕುರಿತು ವೀಕ್ಷಕ ವಿವರಣೆ, ನಡುನಡುವೆ ಹಾಸ್ಯ ಚಟಾಕಿ, ಗೀತಗಾಯನ ಕ್ರೀಡಾಕೂಟಕ್ಕೆ ವಿಶೇಷ ಮೆರಗು ನೀಡಿತು.

ಅಧಿಕಾರಿಗಳ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್‍ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಪ್ರಥಮ, ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ದ್ವಿತೀಯ, ಡಬಲ್ಸ್‍ನಲ್ಲಿ ಎಸ್ಪಿ ರಾಜೇಂದ್ರ ಪ್ರಸಾದ್, ಮಡಿಕೇರಿ ಡಿವೈಎಸ್ಪಿ ಸುಂದರ್‍ರಾಜ್ ತಂಡ ಪ್ರಥಮ, ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ, ಕುಶಾಲನಗರ ಡಿವೈಎಸ್ಪಿ ಮುರಳೀಧರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್‍ನಲ್ಲಿ ಮಡಿಕೇರಿ ತಂಡ ಪ್ರಥಮ ಡಿಎಆರ್ ತಂಡ ದ್ವಿತೀಯ, ಮಹಿಳೆಯರ ಥ್ರೋಬಾಲ್‍ನಲ್ಲಿ ಮಡಿಕೇರಿ ಪ್ರಥಮ, ಸೋಮವಾರಪೇಟೆ ದ್ವಿತೀಯ ಸ್ಥಾನ ಗಳಿಸಿತು. ಕ್ರಿಕೆಟ್ ಪಂದ್ಯಾಟದಲ್ಲಿ ವೀರಾಜಪೇಟೆ ಉಪವಿಭಾಗ ವಿನ್ನರ್, ಡಿಎಆರ್ ರನ್ನರ್ಸ್ ಆಗಿ ಹೊರಹೊಮ್ಮಿತು. ಹಗ್ಗಜಗ್ಗಾಟದಲ್ಲಿ ಡಿಎಆರ್ ಪ್ರಥಮ, ವೀರಾಜಪೇಟೆ ಉಪವಿಭಾಗ ದ್ವಿತೀಯ ಸ್ಥಾನ ಗಳಿಸಿತು.

ರೈಫಲ್ ಶೂಟಿಂಗ್‍ನಲ್ಲಿ ಎಸ್ಪಿ ರಾಜೇಂದ್ರ ಪ್ರಸಾದ್ ಪ್ರಥಮ, ಡಿವೈಎಸ್ಪಿ ಸುಂದರ್‍ರಾಜ್ ದ್ವಿತೀಯ, ಡಿವೈಎಸ್ಪಿ ನಾಗಪ್ಪ - ಮುರಳೀಧರ್ ತೃತೀಯ, ವೃತ್ತ ನಿರೀಕ್ಷಕ ವಿಭಾಗದಲ್ಲಿ ಕುಟ್ಟ ಸಿ.ಐ. ಪಿ.ಕೆ. ರಾಜು ಪ್ರಥಮ, ಡಿಎಸ್‍ಬಿ ಇನ್ಸ್‍ಪೆಕ್ಟರ್ ಉಮೇಶ್ ಉಪ್ಪಳಿಕೆ ದ್ವಿತೀಯ, ಗೋಣಿಕೊಪ್ಪ ಸಿ.ಐ. ದಿವಾಕರ್ ತೃತೀಯ ಸ್ಥಾನ ಪಡೆದರು. ಪಿಎಸ್‍ಐಗಳ ವಿಭಾಗದಲ್ಲಿ ಪಿ. ಜಗದೀಶ್ ಪ್ರಥಮ, ಹೆಚ್.ಎಸ್. ಮಹೇಶ್ ಹಾಗೂ ನಂಜುಂಡ ಸ್ವಾಮಿ ದ್ವಿತೀಯ, ಸುಬ್ರಮಣ್ಯ, ಸಂತೋಷ್ ಕಶ್ಯಪ್, ವೆಂಕಪ್ಪ ತೃತೀಯ ಸ್ಥಾನ ಗಳಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಾದ ವಿಪುಲ್ ಕುಮಾರ್ ಆಗಮಿಸಿದ್ದರು. ಪ್ರಿಯಾಂಕ ಸಿನó ಬಹುಮಾನ ವಿತರಿಸಿದರು. ಎಸ್ಪಿ ರಾಜೇಂದ್ರ ಪ್ರಸಾದ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.