ಮಡಿಕೇರಿ, ಡಿ. 30: ತೀರಾ ಹಾಳಾಗಿದ್ದ ಮಡಿಕೇರಿ-ಭಾಗಮಂಡಲ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲಿಸಿ ಶೀಘ್ರ ಕೆಲಸ ನಿರ್ವಹಣೆಗೆ ಸೂಚನೆ ನೀಡಿದರು.
ಈ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 2 ಕೋಟಿ ಅನುದಾನ ನೀಡಲಾಗಿದ್ದು, ಈ ಅನುದಾನದಲ್ಲಿ ಕೆಲಸ ನಡೆಯುತ್ತಿದೆ. ರಸ್ತೆ ಕಾಮಗಾರಿ ಪ್ರಸ್ತುತ ಬೆಟ್ಟಗೇರಿಯಿಂದ ಅಪ್ಪಂಗಳ ಜಂಕ್ಷನ್ ತನಕ ನಡೆಯುತ್ತಿದೆ. ರಸ್ತೆ ದುರಸ್ತಿಗೆ ರೂ. 2 ಕೋಟಿ ಹಾಗೂ ಗುಂಡಿ ಮುಚ್ಚುವ ಕೆಲಸಕ್ಕೆ ರೂ. 25 ಲಕ್ಷ ಬಿಡುಗಡೆಯಾಗಿದೆ. ಚೇರಂಬಾಣೆಯಿಂದ ತಲಕಾವೇರಿ ತನಕ ಇದರ ಮುಂದುವರಿದ ಕಾಮಗಾರಿಗೆ ಇನ್ನೂ ರೂ. ಒಂದು ಕೋಟಿ ಹಣ ಮಂಜೂರಾಗಿದ್ದು ಸದ್ಯದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಹರೀಶ್ ಬೋಪಣ್ಣ ‘ಶಕ್ತಿ’ಗೆ ತಿಳಿಸಿದರು.
(ಮೊದಲ ಪುಟದಿಂದ) ಕೆಲವು ತಿಂಗಳ ಹಿಂದೆ ರೂ. 2 ಕೋಟಿಯ ಕಾಮಗಾರಿಗೆ ಉಸ್ತುವಾರಿ ಸಚಿವ ಸೀತಾರಾಂ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಟೆಂಡರ್ ಪ್ರಕ್ರಿಯೆ ನಡೆದ ಬಳಿಕವಷ್ಟೆ ಅವರು ಭೂಮಿಪೂಜೆ ನೆರವೇರಿಸಿದ್ದು, ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ಅವರು ಸಹ ಪಾಲ್ಗೊಂಡಿದ್ದರು. ಆದರೆ ಇದಾದ ನಂತರ ರಾಜಕೀಯ ಕಾರಣದಿಂದಾಗಿ ಬಿಜೆಪಿ ರಸ್ತೆ ಕಾಮಗಾರಿ ನಡೆಸಿಲ್ಲ ಎಂಬ ವಿಚಾರ ಮುಂದಿಟ್ಟು, ಜಾಥಾ ನಡೆಸಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದ ಬಳಿಕವೂ ಜಾಥಾ ನಡೆಸಿ ಪ್ರತಿಭಟನೆ ಮಾಡಿದ್ದು ಕೇವಲ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಹರೀಶ್ ಬೋಪಣ್ಣ ಹೇಳಿದರು. ಕಾಮಗಾರಿ ಪರಿಶೀಲನೆ ಸಂದರ್ಭ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವರಾಜ್ ಮತ್ತಿತರರು ಹಾಜರಿದ್ದರು.