ಶ್ರೀಮಂಗಲ, ಡಿ. 30: ಪೊನ್ನಂಪೇಟೆ ಹಾಗೂ ಕುಶಾಲನಗರದ ಕಾವೇರಿ ತಾಲೂಕು ರಚನೆ ಬಗ್ಗೆ ಇರುವ ಬೇಡಿಕೆ ಸರಕಾರದ ಗಮನಕ್ಕೆ ಬಂದಿದೆ. ಈ 2 ತಾಲೂಕು ರಚನೆ ಆಗಬೇಕೆನ್ನುವದೇ ನನ್ನ ನಿಲುವಾಗಿದೆ. ಸಣ್ಣಪುಟ್ಟ ಅಡಚಣೆ ಹಾಗೂ ಕೆಲವು ಹೇಳಿಕೆಗಳನ್ನು ತಪ್ಪಾಗಿ ಅರ್ಥಮಾಡಿ ಕೊಂಡು ನಿರಾಶೆಯಾಗುವದು ಬೇಡ. ಸಚಿವ ಸಂಪುಟದ ಸಭೆ ಸದ್ಯದಲ್ಲಿಯೇ ನಡೆಯಲಿದ್ದು, ಈ ಸಂದರ್ಭ ನಾನು ಸಹ ಭಾಗವಹಿಸಿ ಎರಡು ತಾಲೂಕು ರಚನೆಯ ಬಗ್ಗೆ ಗಮನ ಸೆಳೆಯುವದಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಭರವಸೆ ನೀಡಿದರು.
ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 59 ದಿನದಿಂದ ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು, 2 ತಾಲೂಕು ಹೋರಾಟಗಾರರಿಗೆ ಬೆಂಬಲವಾಗಿ ಮಾತನಾಡಿದ್ದಾರೆ. ಅವರು ಈಗಾಗಲೇ 2 ತಾಲೂಕು ಹೋರಾಟಗಾರರ ನಿಯೋಗವನ್ನು ಕರೆದುಕೊಂಡು ಹೋಗಿ ಸಿ.ಎಂ. ಸಿದ್ದರಾಮಯ್ಯ ಅವರೊಂದಿಗೆ ಮನವರಿಕೆ ಮಾಡಲು ನನ್ನೊಂದಿಗೆ ಪ್ರಸ್ತಾಪಿಸಿದ್ದಾರೆ. ಉಸ್ತುವಾರಿ ಸಚಿವರು 2 ತಾಲೂಕು ರಚನೆಗೆ ಬೆಂಬಲವಾಗಿ ಪ್ರಯತ್ನಿಸುತ್ತಿ ದ್ದಾರೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದರು.
ಸರಕಾರ ಕಳೆದ ಬಜೆಟ್‍ನಲ್ಲಿ 50 ತಾಲೂಕು ಘೋಷಣೆ ಮಾಡುವದಕ್ಕೂ ಮೊದಲು ಸರಕಾರಕ್ಕೆ ತಾಲೂಕು ರಚನೆಯ ಬಗ್ಗೆ ಹೆಚ್ಚಿನ ಒತ್ತಡ ಇರಲಿಲ್ಲ. ಇದೀಗ ತಾಲೂಕು ಘೋಷಣೆಯಾದ ನಂತರವಷ್ಟೆ ಎಚ್ಚೆತ್ತುಕೊಂಡು ಹೋರಾಟ ನಡೆಯುತ್ತಿದೆ. ವಿಧಾನಸೌಧದಲ್ಲಿ ಹಾಗೂ ಬೆಳಗಾಂ ಅಧಿವೇಶನದ ಸಂದರ್ಭ ಜಿಲ್ಲೆಯ 2 ತಾಲೂಕು ರಚನೆಯ ಬೇಡಿಕೆಯ ಬಗ್ಗೆ ಸಿ.ಎಂ. ಗಮನ ಸೆಳೆಯಲಾಗಿದೆ. ಈ ಸಂದರ್ಭ ಸಿ.ಎಂ. ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜಿಲ್ಲೆಯ ಎರಡು ತಾಲೂಕು ರಚನೆ ಆಗಬೇಕೆಂಬದು ನನ್ನ ನಿಲುವಾಗಿದೆ. ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿಕೊಂಡು ಸರಕಾರದ ಗಮನ ಸೆಳೆಯಲಾಗು ವದೆಂದು ಭರವಸೆ ನೀಡಿದರು.
ಈ ಸಂದರ್ಭ ತಾಲೂಕು ಹೋರಾಟಗಾರರ ಪರವಾಗಿ ಮಾತನಾಡಿದ ತಾ.ಪಂ. ಮಾಜಿ ಉಪಾಧ್ಯಕ್ಷ ಕೋಳೇರ ದಯಾ ಚಂಗಪ್ಪ, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ತಾ.ಪಂ. ಮಾಜಿ ಸದಸ್ಯ ಅಡ್ಡಂಡ ಕಾರ್ಯಪ್ಪ ಅವರು, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ನೇತೃತ್ವದ ಲ್ಲಿಯೇ ತಾಲೂಕು ರಚನೆಗೆ ಎಲ್ಲಾ ಮುಖಂಡರನ್ನು ಸೇರಿಸಿ ಕೊಂಡು ಸಿ.ಎಂ. ಅವರ ಮನವೊಲಿಸಲು ಮುಂದಾಗಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರು. ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರು ಪ್ರತಿಭಟನೆಗೆ ಆಗಮಿಸಿದ ಸಂದರ್ಭ ಗಾಂಧಿ ಪ್ರತಿಮೆಗೆ ಮಾಲರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಇದಕ್ಕೂ ಮೊದಲು ತಾಲೂಕು ಹೋರಾಟ ನಿರತ ಸ್ಥಳಕ್ಕೆ ಆಗಮಿಸಿದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರು, ತಮ್ಮ ಮನವಿಗೆ ಈಗಾಗಲೇ ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅವರ ಸಚಿವಾಲಯದ ಉಪಕಾರ್ಯದರ್ಶಿ ಅರುಣ್ ಪುರ್ಟಾಡೊ ಅವರು ಸೂಚಿಸಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಸಿ.ಎಂ. ಅವರನ್ನು ಭೇಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಗಮನ ಸೆಳೆಯುವದಾಗಿ ಭರವಸೆ ನೀಡಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಯುತ್ತನ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷ ಮೂಕಳೇರ ಸುಮತಿ, ಉಪಾಧ್ಯಕ್ಷೆ ಮಂಜುಳಾ, ಪೊನ್ನಂಪೇಟೆ ಹಿರಿಯ ನಾಗರಿಕ ಹೋರಾಟ ಸಮಿತಿಯ ಅದ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ, ಪ್ರಮುಖರಾದ ಕೊಟ್ಟಗೇರಿಯ ಬಾಚಮಾಡ ಜನಾರ್ಧನ (ರಾಜು), ಮಲ್ಲಮಾಡ ಪ್ರಭು ಪೂಣಚ್ಚ, ಸರಾ ಚಂಗಪ್ಪ, ಆಲೀರ ಎರ್ಮು ಹಾಜಿ, ಮತ್ರಂಡ ದಿಲ್ಲು, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಅಣ್ಣೀರ ಹರೀಶ್, ಚಂದ್ರ ಸಿಂಗ, ರಸಿಕಾ, ಅನೀಶ್, ಲಕ್ಷ್ಮಣ, ತಾ.ಪಂ. ಮಾಜಿ ಸದಸ್ಯ ಸಾಜಿ ಅಚ್ಯುತ್ತನ್, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.