ಶ್ರೀಮಂಗಲ, ಡಿ. 29: ಪೊನ್ನಂಪೇಟೆ ತಾಲೂಕು ಪುನರ್‍ರಚನೆಗೆ ಆಗ್ರಹಿಸಿ ಕಳೆದ 58 ದಿನಗಳಿಂದ ಗಾಂಧಿ ಪ್ರತಿಮೆ ಎದುರು ತಾಲೂಕು ರಚನಾ ಸಮಿತಿ ಹಾಗೂ ಹಿರಿಯ ನಾಗರಿಕ ವೇದಿಕೆಯ ವತಿಯಿಂದ ನಡೆಸುತ್ತಿರುವ ಹೋರಾಟವನ್ನು ಮುಂದುವರೆ ಸುವಂತೆ ಸಮಿತಿಯ ತುರ್ತು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.ತಾ. 28 ರಂದು ಉಸ್ತುವಾರಿ ಸಚಿವ ಸೀತಾರಾಮ್ ರವರು ತಾಲೂಕು ಹೋರಾಟ ಕೈಬಿಡಲು ಕರೆ ನೀಡಿದರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಯಿತು. ಸಚಿವರ ಕರೆಗೆ ತಾಲೂಕು ರಚನೆ ಹೋರಾಟ ಕೈಬಿಡದಿರಲು ಒಕ್ಕೋರಲಿನ ತೀರ್ಮಾನವನ್ನು ತೆಗೆದು ಕೊಳ್ಳಲಾಯಿತು. ಪೊನ್ನಂಪೇಟೆಯ ಸುತ್ತಮುತ್ತಲಿನ 21 ಗ್ರಾ.ಪಂ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಬೈಕ್ ಜಾಥಾವನ್ನು ಜನವರಿ 2ರಂದು ನಡೆಸುವಂತೆಯು ಹಾಗೂ ತಾ. 8 ರಂದು ಗಾಂಧಿ ಮಂಟಪದ ಎದುರು ಬೃಹತ್ ಸಭೆಯನ್ನು ಏರ್ಪಡಿಸುವಂತೆ ತಾ. 9ರ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಅಗಮಿಸಲಿದ್ದು, ಈ ಸಂದರ್ಭ ನಿಯೋಗ ತೆರಳಿ ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ಖುದ್ದಾಗಿ ವಿವರಣೆಯನ್ನು ನೀಡುವಂತೆ ತೀರ್ಮಾನಿಸಲಾಯಿತು.
ಉಸ್ತುವಾರಿ ಸಚಿವರ ಹೇಳಿಕೆಗೆ ಖಂಡನೆ: ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಕಳೆದ 58 ದಿನಗಳಿಂದ ಶಾಂತಿಯುತವಾಗಿ ನಾವು ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ರಾಜಕೀಯ ರಹಿತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಹಾಗೂ ಪೊನ್ನಂಪೇಟೆ ತಾಲೂಕು ರಚನೆಗೆ ಇರುವ ಅಗತ್ಯತೆ ಹಾಗೂ ಮಾನದಂಡಗಳನ್ನು ಈಗಾಗಲೇ ಸರ್ಕಾರದ ಮುಂದೆ ನಾಲ್ಕು ಬಾರಿ ಪ್ರಸ್ತಾವನೆ ಇಟ್ಟರೂ ಉಸ್ತುವಾರಿ ಸಚಿವರು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿಲ್ಲ
(ಮೊದಲ ಪುಟದಿಂದ) ಎಂಬ ಹೇಳಿಕೆ ನೀಡಿರುವದು ಅಸಮಂಜಸ ಎಂದರು.
ಈ ಸಂದರ್ಭ ಉಸ್ತುವಾರಿ ಸಚಿವರ ಹೇಳಿಕೆಗೆ ಸಮಜಾಯಿಸಿಕೆ ನೀಡಲು ಮುಂದಾದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಸೈನಾರ್ ಉಸ್ತುವಾರಿ ಸಚಿವರು ಆ ರೀತಿ ಹೇಳಿಕೆ ನೀಡಿಲ್ಲ. ಮಾಧ್ಯಮದವರು ಹೇಳಿಕೆಯನ್ನು ತಿರುಚಿದ್ದಾರೆ ಎಂದು ಹೇಳಿದಾಗ ವ್ಯಾಪಕ ಖಂಡನೆ ವ್ಯಕ್ತವಾಯಿತು. ಇದರಿಂದ ವಿಚಲಿತರಾದ ಹಸೈನಾರ್ ಸ್ಥಳದಿಂದ ತೆರಳಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಡಿಸಿಸಿ ಸಭೆಯಲ್ಲಿ ತಾಲೂಕು ರಚನೆಯ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸಂದರ್ಭ ಈಗಾಗಲೇ ಸರ್ಕಾರದಿಂದ ಘೋಷಿತವಾಗಿರುವ 50 ತಾಲೂಕು ರಚನೆಗೆ ಸರ್ಕಾರ ಮುಂದಾಗಲಿದ್ದು, ತಾ. 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗು ಜಿಲ್ಲಾ ಭೇಟಿ ಸಂದರ್ಭ 2 ತಾಲೂಕು ರಚನೆಯ ಪ್ರಮುಖರ ಖುದ್ದು ಭೇಟಿಗೆ ವ್ಯವಸ್ಥೆಯನ್ನು ಕಲ್ಪಿಸುವದಾಗಿ ಸಚಿವ ಸೀತಾರಾಮ್ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪೊನ್ನಂಪೇಟೆ ತಾಲೂಕು ಪುನರ್ ರಚನಾ ಸಮಿತಿಯ ಅಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ತಾಲೂಕು ರಚನೆಯ ಬಗ್ಗೆ ಈಗಾಗಲೇ ಸರ್ಕಾರ ವರದಿಗಳನ್ನು ಹಾಗೂ ಕಡತಗಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಮುಖಾಂತರ ಪಡೆದುಕೊಂಡಿದೆ. ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ಸಂದರ್ಭ ತಾಲೂಕು ಘೋಷಣೆಯ ಆಶಾಭಾವ ನಮ್ಮಲ್ಲಿದೆ. ಆದರೆ, ಉಸ್ತುವಾರಿ ಸಚಿವರ ಈ ಹೇಳಿಕೆಯಿಂದ ಗೊಂದಲ ಉಂಟಾಗಿದೆ. ತಾ 9ರಂದು ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿಯವರೆಗೆ ಸಮಿತಿಯ ವತಿಯಿಂದ ತಾಲೂಕು ರಚನೆಗೆ ಪೂರಕವಾದ ಎಲ್ಲಾ ಪ್ರಯತ್ನವನ್ನು ಮಾಡಲಾಗುವದು ಎಂದು ತಿಳಿಸಿದರು. ಕೋಳೆರ ದಯಾ ಚಂಗಪ್ಪ ಮಾತನಾಡಿ, ಉಸ್ತುವಾರಿ ಸಚಿವರು ನಮ್ಮ ಪ್ರಯತ್ನವನ್ನು ಹತ್ತಿಕ್ಕುವ ಯತ್ನಕ್ಕೆ ಮುಂದಾಗಿರುವದು ಖಂಡನೀಯ ಎಂದು ತಿಳಿಸಿದರು.
ಈ ಸಂದರ್ಭ ಹಿರಿಯ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಬಿ.ಪೂಣಚ್ಚ, ಸಂಚಾಲಕ ಮಾಚಿಮಾಡ ರವೀಂದ್ರ, ಚೆಟ್ರುಮಾಡ ಶಂಕರು ನಾಚಪ್ಪ, ಮಲ್ಲಮಾಡ ಪ್ರಭು, ಕಟ್ಟೇರ ಲಾಲಪ್ಪ, ಮೂಕಳೇರ ಕುಶಾಲಪ್ಪ, ಮೂಕಳೇರ ಲಕ್ಷ್ಮಣ, ಚಕ್ಕೇರ ಕಾಶಿ ಅಪ್ಪಯ್ಯ, ಮತ್ರಂಡ ಅಪ್ಪಚ್ಚು, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮುಂತಾದವರು ಹಾಜರಿದ್ದರು.