ಗೋಣಿಕೊಪ್ಪಲು, ಡಿ. 29: ಪ್ರಪಂಚ ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ನಮ್ಮೊಡನೆ ಬೆರೆತಿದೆ ಆದರೇ ಕಾಡು ಮಕ್ಕಳ ಪರಿಸ್ಥಿತಿ ಮಾತ್ರ ಇಂದು ಅತಂತ್ರ ಬದುಕಿನಲ್ಲಿರುವದು ವಿಪರ್ಯಾಸ. ಕೊಡಗಿನ ಅದೆಷ್ಟೂ ಹಾಡಿ ಮಂದಿ ಇಂದು ಕೂಡ ಕಷ್ಟದ ಕೂಪದಲ್ಲಿ ಮಿಂದೇಳುತ್ತಿದ್ದಾರೆ. ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿರುವ ಕಾಡು ಮಕ್ಕಳು ಎಂದು ಮುಖ್ಯವಾಹಿನಿಗೆ ಬಾರದೇ ಕತ್ತಲ ಕೂಪದಲ್ಲಿ ನರಳಾಡುತ್ತಿದ್ದಾರೆ.
ದೇವರಪುರ ಗಿರಿಜನ ಹಾಡಿಯ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ಹಾಡಿಯ ಜನ ಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಹಾಡಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಬಂದು ವರ್ಷಗಳೇ ಉರುಳಿವೆ.
ಹಾಡಿ ನಿವಾಸಿಗಳು ಕುಡಿಯುವ ನೀರಿಗಾಗಿ ತೆರೆದ ಬಾವಿ ಅವಲಂಬಿಸಿದ್ದು ಇದು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಕಾಯಿಲೆಗಳು ಬಂದರೆ ಗಿರಿಜನರನ್ನು ಆ ದೇವರೆ ಕಾಪಾಡಬೇಕಿದೆ ತಿತಿಮತಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಈ ಹಾಡಿಗೆ ಒಂದಿಷ್ಟು ಆರೋಗ್ಯ ಸೇವೆ ಲಭಿಸುತ್ತಿರುವದು ಪುಣ್ಯ.
150ಕ್ಕೂ ಅಧಿಕ ಮನೆಗಳು ಈ ಹಾಡಿಯಲ್ಲಿವೆ. ಆದರೆ ಯಾವದೇ ಕುಟುಂಬಗಳಿಗೆ ಇಲ್ಲಿಯ ತನಕ ಸರ್ಕಾರದಿಂದ ಹಕ್ಕುಪತ್ರ ದೊರಕಿಲ್ಲ. ಕೆಲವು ಕುಟುಂಬಗಳಿಗೆ ಕೇವಲ ಒಂದು ಕೋಣೆಯ ಮನೆ ಇದೆ. ಕುಟುಂಬದಲ್ಲಿ ಹೆಚ್ಚಿನ ಜನ ಇದ್ದರೂ ಈ ಮನೆಯಲ್ಲೇ ಮುದುಡಿಕೊಂಡು ಮಲಗಬೇಕಾದ ಪರಿಸ್ಥಿತಿ.
ಕೆಲವರು ಅಡುಗೆ ಮಾಡಲು ಹೊರ ಭಾಗದಲ್ಲಿ ಪ್ರತ್ಯೇಕ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಈ ಮನೆಗಳಿಗೆ ವಿದ್ಯುತ್ಚ್ಛಕ್ತಿ ಅಳವಡಿಸಿದ್ದರೂ ಇಲ್ಲಿಯ ತನಕ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕೇವಲ ನೆಪಗಳನ್ನೇ ಹೇಳುತ್ತಾ ಅಧಿಕಾರಿಗಳು ಸಮಯ ಕಳೆಯುತ್ತಿದ್ದಾರೆ. ಕುಡಿಯುವ ನೀರಿಗೆ ಇರುವ ಏಕೈಕ ತೆರೆದ ಬಾವಿಯನ್ನೇ ನಂಬಿರುವ ಇಲ್ಲಿಯ ಜನ ಈ ನೀರನ್ನು ಕುಡಿಯಲಾರದ ಪರಿಸ್ಥಿತಿ ಇದ್ದರೂ ಬಳಸುತ್ತಿದ್ದಾರೆ.
ಶೌಚಗೃಹಗಳಿಲ್ಲದೆ ಕಾಡನ್ನೇ ಅವಲಂಬಿಸಿದ್ದಾರೆ. ಶೌಚಕ್ಕೆ ತೆರಳಿದವರು ಕಾಡಾನೆ ಧಾಳಿಯಿಂದ ಮೃತಪಟ್ಟಿದ್ದಾರೆ. ವಯಸ್ಕರು ಸಮೀಪದ ಕಾಫಿತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲ ಮಕ್ಕಳು ಹಾಡಿಯಲ್ಲೇ ಆಟವಾಡುತ್ತಾ ಸಮೀಪದ ಅಂಗನವಾಡಿಗೆ ತೆರಳುತ್ತಾರೆ. ಅಣತಿ ದೂರದಲ್ಲೇ ರಾಜ್ಯ ಹೆದ್ದಾರಿಯ ಪಟ್ಟಣವಿದ್ದರು ಇವರಿಗೆ ಮಾತ್ರ ಇನ್ನು ಕೂಡ ಮೂಲಭೂತ ಸೌಕರ್ಯ ದೊರಕದಿರುವದು ದುರಂತ.
ಆದಿವಾಸಿಗಳ ಕಲ್ಯಾಣಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರÀಗಳಿಗೆ ಇದೊಂದು ಉದಾಹರಣೆಯಾದೀತು. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ದೇವರಪುರ ಹಾಡಿ ಮಂದಿಗೆ ಸೂಕ್ತ ಸೌಲಭ್ಯ ಒದಗಿಸಲಿ ಎಂಬದು ನಮ್ಮ ಕಳಕಳಿ.
ನ್ಯಾಯಾಲಯದಲ್ಲಿ ವ್ಯಾಜ್ಯ
ದೇವರಪುರ ಹಾಡಿ ಸಮಸ್ಯೆಗೆ ನಿರಂತರ ಹೋರಾಟವನ್ನು ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬಂದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಸಂಘಟನೆಯೊಂದು ನ್ಯಾಯಾಲಯದ ಮೆಟ್ಟಿಲೇರಿ ಮೂಲಭೂತ ಸೌಕರ್ಯ ನೀಡದಂತೆ ತಡೆಯಾಜ್ಞೆ ತಂದಿದೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಮುಂದೆ ಸಮಸ್ಯೆ ಬಗೆ ಹರಿಯುವ ಪ್ರಯತ್ನದಲ್ಲಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ತಿಳಿಸಿದ್ದಾರೆ.
ಅನುದಾನವಿದ್ದರೂ ಬಳಕೆ ಆಗುತ್ತಿಲ್ಲ
ಗಿರಿಜನರ ನೋವಿನ ಅರಿವಿದೆ. ತಾನೊಬ್ಬ ಗಿರಿಜನ ಮಹಿಳೆಯಾಗಿ ಇವರಿಗೆ ನ್ಯಾಂiÀiಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಭಾಗದ ರಸ್ತೆ, ಕುಡಿಯುವ ನೀರಿನ ಯೋಜನೆಗೆ ಹಣ ಮೀಸಲಿಟ್ಟಿದ್ದೇವೆ. ಆದರೆ ಯಾವದೇ ಕೆಲಸ ಮಾಡಲು ಕಾನೂನಿನ ಅಡಚಣೆಯಿದೆ ಎಂದು ಅಧಿಕಾರಿಗಳು ಸಮಜಾಯಿಸಿಕೆ ನೀಡುತ್ತಾ ವರ್ಷಗಳೇ ಕಳೆದಿವೆ. ಅನುದಾನವಿದ್ದರು ಬಳಕೆ ಮಾಡಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜಿ.ಪಂ. ಸದಸ್ಯೆ ಪಂಕಜ ತಿಳಿಸಿದ್ದಾರೆ.
ಯಾವದೇ ಚುನಾವಣೆ ಇರಲಿ ರಾಜಕೀಯ ಪಕ್ಷದ ಪ್ರಮುಖರು ಮತ ಕೇಳಲು ಹಾಡಿಗೆ ಓಡೋಡಿ ಬರ್ತಾರೆ. ಭರವಸೆ ನೀಡಿ ತೆರಳುತ್ತಾರೆ. ನಮಗಂತು ಇವರ ಮಾತಿನಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ. ನಮ್ಮ ಕಷ್ಟ ಸುಖಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕರೆಂಟ್ ಇಲ್ಲದೆ ಮಕ್ಕಳು ರಾತ್ರಿ ವೇಳೆಯಲ್ಲಿ ಓದುವದನ್ನೇ ಮರೆತಿದ್ದಾರೆ ಎಂದು ಹಾಡಿಯ ಬೋಜಮ್ಮ ಪ್ರತಿಕ್ರಿಯಿಸಿದ್ದಾರೆ.
- ಹೆಚ್.ಕೆ. ಜಗದೀಶ್