ವೀರಾಜಪೇಟೆ, ಡಿ. 29: ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೊಡವ ಸಮಾಜದ ಬಳಿಯಿರುವ ಪೂಮಾಲೆ ಮಂದ್‍ಗೆ ಜಿಲ್ಲಾ ಪಂಚಾಯಿತಿ ಅನುದಾನದಿಂದ ರೂ. 2 ಲಕ್ಷ ನೀಡಲಾಗಿದ್ದು, ಇನ್ನು ಹೆಚ್ಚಿನ ಕಾಮಗಾರಿಗಳಿಗಾಗಿ ರೂ. 2 ಲಕ್ಷ ನೀಡಲಾಗುವದು ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಶಿ ಸುಬ್ರಮಣಿ ಹೇಳಿದರು.ವೀರಾಜಪೇಟೆ ಕೊಡವ ಸಮಾಜದ ಪಕ್ಕದ ರಸ್ತೆಯಿಂದ ಕೊಡವ ರುದ್ರಭೂಮಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಅನುದಾನದಿಂದ ರೂ. 1.5 ಲಕ್ಷದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಶಿ ಸುಬ್ರಮಣಿ ಬಳಿಕ ಮಾತನಾಡಿ, ಕೊಡವ ರುದ್ರಭೂಮಿಗೆ ಹೋಗುವ ರಸ್ತೆ ಕಿರಿದಾಗಿದ್ದು ಜನರ ಬೇಡಿಕೆಯಂತೆ ಈ ರಸ್ತೆ ಅಭಿವೃದ್ಧಿ ಗೊಳಿಸಲಾಗುವದು. ಶಾಸಕ ಕೆ.ಜಿ. ಬೋಪಯ್ಯ ಅವರು ಈ ರುದ್ರಭೂಮಿಗೆ ರೂ. 5 ಲಕ್ಷ ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ನೀಡಲಿದ್ದಾರೆ ಎಂದು ಹೇಳಿದ ಅವರು ಜಿಲ್ಲಾ ಪಂಚಾಯಿತಿ ಅನುದಾನದಿಂದ ಕದನೂರು ಮುಖ್ಯ ರಸ್ತೆಯಿಂದ ನರ್ಸರಿಗೆ ಹೋಗುವ ರಸ್ತೆ ಕಾಮಗಾರಿಗೆ ರೂ. 1 ಲಕ್ಷ, ಮಗ್ಗುಲ ಗ್ರಾಮದ ಪಾರ್ಲೆ ಅಯ್ಯಪ್ಪ ದೇವಾಲಯದ ಬಳಿಯ ರಸ್ತೆ ಅಭಿವೃದ್ಧಿಗೆ ರೂ. 1 ಲಕ್ಷ ನೀಡಲಾಗಿದ್ದು ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವದು ಎಂದರು.

ಈ ಸಂದರ್ಭ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಮ್ ನಾಣಯ್ಯ, ಸದಸ್ಯ ತಾತಂಡ ಬಿಪಿನ್, ಪ್ರಮುಖರಾದ ಬೊಳ್ಳಚಂಡ ಪ್ರಕಾಶ್, ಮಂಡೆಪಂಡ ಜನಾನ್, ಬನ್ಸಿ ಪೂಣಚ್ಚ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.