ಮಡಿಕೇರಿ, ಡಿ.29: ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಸಾಹಿತ್ಯದ ಮೂಲಕ ವೈಚಾರಿಕ ಕ್ರಾಂತಿಗೆ ಬೆಳಕು ಚೆಲ್ಲಿದ ರಾಷ್ಟ್ರಕವಿ ಕುವೆಂಪು ಅವರ ಕಥೆ, ಕಾದಂಬರಿ, ನಾಟಕ, ಕವಿತೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ರೇಷ್ಮೆ ಮಾರಾಟ ಮಂಡಳಿ ರಾಜ್ಯ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ನಡೆದ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಇಪ್ಪತ್ತನೇ ಶತಮಾನದಲ್ಲಿ ದೇಶದಲ್ಲಿ ಉಂಟಾದ ಸಾಮಾಜಿಕ ಪರಿವರ್ತನೆಗಳು ಹಾಗೂ ಸವಾಲುಗಳನ್ನು ಕುವೆಂಪು ಅವರ ಕಾದಂಬರಿಗಳು ಸೂಕ್ಷ್ಮವಾಗಿ ಕಟ್ಟಿಕೊಡುತ್ತವೆ. ಪ್ರತಿಯೊಬ್ಬರೂ ಕುವೆಂಪು ಅವರ ಕಥೆ, ಕಾದಂಬರಿ, ನಾಟಕ, ಕವಿತೆಗಳನ್ನು ಓದು ವಂತಾಗಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಕುವೆಂಪು ರಚಿಸಿದ್ದಾರೆ. ಮಾನವ

(ಮೊದಲ ಪುಟದಿಂದ) ಪರಿಕಲ್ಪನೆಯನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ ಕುವೆಂಪು ಅವರು ರಚಿಸಿರುವ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಎರಡು ಮಹಾ ಕಾವ್ಯಗಳು ಸಾಹಿತ್ಯದ ಮೌಲ್ಯವನ್ನು ಪ್ರತಿಬಿಂಭಿಸುತ್ತದೆ. ಹಾಗೆಯೇ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ವಿಶ್ವ ವಿಖ್ಯಾತಿಯಾಗಿದೆ ಎಂದು ತಿಳಿಸಿದರು.

ಸಾಹಿತಿ ಬಿ.ಎ.ಷಂಶುದ್ದೀನ್ ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತಾಗಲು ಕುವೆಂಪು ಪ್ರೇರೇಪಿಸಿದರು. ಹಲವು ನಾಟಕ, ಕಾದಂಬರಿ, ಕವಿತೆ ಬರೆಯುವ ಮೂಲಕ ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ.ಮುಖ್ಯ ಯೋಜನಾಧಿಕಾರಿ ಸಿದ್ದಲಿಂಗ ಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭಾಗ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ನಂದ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ರಾಷ್ಟ್ರಕವಿ ಕುವೆಂಪು ಅವರು ರಚಿತ ಗೀತೆಗಳ ಗಾಯನವನ್ನು ಗೋಪಿ ಮತ್ತು ತಂಡದವರು ಹಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಸಾವಿತ್ರಿ ನಿರೂಪಿಸಿದರು, ಮಣಜೂರು ಮಂಜುನಾಥ್ ವಂದಿಸಿದರು.