ಕರಿಕೆ, ಡಿ. 29: ಕರಿಕೆ ಎಂದೊಡನೆ ನೆನಪಾಗುವದು ಗಡಿಗ್ರಾಮ. ಈ ಗ್ರಾಮ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಸುತ್ತಲೂ ರಮಣೀಯ ಬೆಟ್ಟ ಗುಡ್ಡಗಳ ಸಾಲಿನಲ್ಲಿರುವ ಗ್ರಾಮವಾಗಿದ್ದು, ಮಧ್ಯೆ ಹಾದುಹೋಗಿರುವ ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳ ಬೆಟ್ಟಗುಡ್ಡಗಳ ಸಾಲಿನಲ್ಲಿ ಜನರ ವಾಸಸ್ಥಾನ. ಈ ಗಡಿಗ್ರಾಮ ಕರಿಕೆ ಇದೇ ಮೊದಲ ಬಾರಿಗೆ ಕನ್ನಡ ನುಡಿ ಜಾತ್ರೆಗೆ ಸಿದ್ದಗೊಂಡಿದೆ.

ಇಂದು ಕೊಡಗಿನ ಗಡಿಗ್ರಾಮ ಕರಿಕೆಯಲ್ಲಿ ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಗಡಿಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ನುಡಿಜಾತ್ರೆ ನಡೆಯುವದರಿಂದ ಹಲವು ಸಮಿತಿಗಳು ಉತ್ಸಾಹದಿಂದಲೇ ಸಿದ್ಧತೆ ಮಾಡಿಕೊಂಡಿದೆ. ಕನ್ನಡ ನುಡಿಜಾತ್ರೆಗೆ ಆಗಮಿಸುವ ಕನ್ನಡಾಭಿಮಾನಿಗಳನ್ನು ಸ್ವಾಗತಿಸಲು ನಾಡಿನ ಹಿರಿಯರ ಹೆಸರಿನಲ್ಲಿ ನಿರ್ಮಿಸಲಾಗಿರುವ ಮೂರು ದ್ವಾರಗಳು ತಲೆ ಎತ್ತಿವೆ.