ಗೋಣಿಕೊಪ್ಪ ವರದಿ, ಡಿ. 28: ದಾನಮ್ಮಳ ಮೇಲೆ ನಡೆದ ಅತ್ಯಾಚಾರ ಪ್ರಕರಣ ಹಾಗೂ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರ ಹೇಳಿಕೆ ಖಂಡಿಸಿ ಜ. 1 ರಂದು ತಿತಿಮತಿ ಪಟ್ಟಣ ಬಂದ್ ಮತ್ತು ರಸ್ತೆ ತಡೆ ನಡೆಯಲಿದೆ ಎಂದು ಡಿಎಸ್ಎಸ್ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ತಿತಿಮತಿ ಪಟ್ಟಣ ಬಂದ್ ನಡೆಸಲಾಗುವದು. ಈ ಸಂದರ್ಭ ರಸ್ತೆ ತಡೆ ನಡೆಸಿ ಕ್ರಮಕ್ಕೆ ಒತ್ತಾಯಿಸಲಾಗುವದು ಎಂದರು.
ಜಿಲ್ಲಾ ಸಂಚಾಲಕ ಹೆಚ್. ಆರ್. ಪರಶುರಾಮ್ ಮಾತನಾಡಿ, ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ವಿರುದ್ಧ ತುಚ್ಚವಾಗಿ ಮಾತನಾಡಿದ್ದಾರೆ. ಅವರನ್ನು ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ತರಬೇಕು ಎಂದು ಹೇಳಿದರು. ಮಹಿಳಾ ಸಂಘಟನೆಗಳು, ಮಹಿಳಾ ಆಯೋಗ ಎಚ್ಚೆತ್ತುಕೊಂಡು ದಾನಮ್ಮಳ ವಿಚಾರದಲ್ಲಿ ನ್ಯಾಯ ಸಿಗುವಂತಾಗಬೇಕು ಎಂದು ಸಂಚಾಲಕ ಶಿವಕುಮಾರ್ ಒತ್ತಾಯಿಸಿದರು.
ಈ ಸಂದರ್ಭ ಸಂಘಟನಾ ಸಂಚಾಲಕ ರಜನಿಕಾಂತ್, ಗ್ರಾಮ ಸಂಚಾಲಕ ಮಂಜುನಾಥ್ ಉಪಸ್ಥಿತರಿದ್ದರು.