ಕುಶಾಲನಗರ / ಕೂಡಿಗೆ, ಡಿ. 23: ಜೀವನದಲ್ಲಿ ಸಿಗುವ ಅವಕಾಶಗಳನ್ನು ಕೈಚೆಲ್ಲಬಾರದು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯನ್ನೂ ಸಮತೋಲನದೊಂದಿಗೆ ನಿರ್ವಹಿಸುವ ಚಾಕಚಕ್ಯತೆಯೊಂದಿಗೆ ಜೀವನದಲ್ಲಿ ಸಾಧನೆಯೊಂದಿಗೆ ಯಶಸ್ಸು ಗಳಿಸಬೇಕೆಂದು ಅಂತರ್ರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ 2017ರ ಏಷ್ಯನ್ ಮಹಿಳಾ ಚಾಂಪಿಯನ್ ಕೊಡಗಿನ ಹೆಮ್ಮೆಯ ಕ್ರೀಡಾಪಟು ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ ಅವರು ಕರೆ ನೀಡಿದರು.

ಕೂಡಿಗೆಯ ಸೈನಿಕ ಶಾಲೆಯಲ್ಲಿ ರೂ. 60 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ನೂತನ ಸ್ಕ್ವಾಷ್ ಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಠಿಣ ಪರಿಶ್ರಮ, ತನ್ಮಯತೆಯ ಮೂಲಕ ಕ್ರೀಡಾರಂಗದಲ್ಲಿ ಯಶಸ್ಸು ಕಾಣಲು ಸಾಧ್ಯ. ಸರಿಯಾದ ಮಾರ್ಗದಲ್ಲಿ ಮುನ್ನಡೆದರೆ ಕ್ರೀಡೆಯಲ್ಲಿ ಅವಿಸ್ಮರಣೀಯ ಸಾಧನೆಯನ್ನು ಮಾಡಬಹುದಾಗಿದೆ ಎಂದ ಅವರು, ತಮ್ಮ ಬಾಲ್ಯದ ಶಾಲಾ ದಿನಗಳ ಬಗ್ಗೆ ಮೆಲುಕು ಹಾಕಿದರು. ತಮಿಳುನಾಡು ರಾಜ್ಯವನ್ನು ಸ್ಕ್ವಾಷ್ ಕ್ರೀಡೆಯಲ್ಲಿ ಪ್ರತಿನಿಧಿಸಿರುವ ಅಂಜನ್ ಚಿಣ್ಣಪ್ಪ ಅವರ ಪುತ್ರಿಯಾದ ಜೋತ್ಸ್ನಾ ಈ ಕ್ರೀಡೆ ತನಗೆ ತಂದೆಯ ಮೂಲಕ ಪರಿಚಯವಾಗಿ ಆಸಕ್ತಿ ಹುಟ್ಟಿಸಿತು. ತಂದೆಯ ಪ್ರೋತ್ಸಾಹದಿಂದಾಗಿ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಸಾಧ್ಯವಾಯಿತು ಎಂದು ಸ್ಮರಿಸಿದರು.

(ಮೊದಲ ಪುಟದಿಂದ) ಕೂಡಿಗೆ ಸೈನಿಕ ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಶಾಲೆಯಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯ ಬಗ್ಗೆಯೂ ಪ್ರೋತ್ಸಾಹ ನೀಡುತ್ತಿರುವದನ್ನು ಶ್ಲಾಘಿಸಿದರು.

ಕ್ರೀಡಾತಾರೆ ಸೇರಿದಂತೆ ಅತಿಥಿಗಳನ್ನು ಶಾಲಾ ಅಶ್ವದಳದ ಸ್ವಾಗತದೊಂದಿಗೆ ಕರೆತರಲಾಯಿತು.

ಔಪಚಾರಿಕ ಪಂದ್ಯ : ಸ್ಕ್ವಾಷ್ ವಿಶೇಷ ರೀತಿಯ ಕ್ರೀಡೆಯಾಗಿದ್ದು, ರೂ. 60 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಎರಡು ಕ್ರೀಡಾಂಗಣ ನಿರ್ಮಾಣಗೊಂಡಿದ್ದು, 50 ಜನ ಕ್ರೀಡಾಭಿಮಾನಿಗಳು ಕುಳಿತು ವೀಕ್ಷಣೆ ಮಾಡುವ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಘಾಟನೆ ಬಳಿಕ ಔಪಚಾರಿಕವಾಗಿ ಪಂದ್ಯ ಪ್ರದರ್ಶಿಸಲಾಯಿತು. ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯು, ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ, ಸ್ಕ್ವಾಷ್ ಕ್ರೀಡೆಯಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿದ ಜೋತ್ಸ್ನಾ ಅವರ ತಂದೆ ಅಂಜನ್ ಚಿನ್ನಪ್ಪ, ಕೂಡಿಗೆ ಕ್ರೀಡಾಶಾಲೆ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ, ಕೂಡಿಗೆ ಟಾಟಾ ಕಾಫಿ ಸಂಸ್ಥೆ ಪ್ರಧಾನ ವ್ಯವಸ್ಥಾಪಕರಾದ ರಿಕಿ ಅಯ್ಯಪ್ಪ, ಉದ್ಯಮಿ ಮಧು ಬೋಪಣ್ಣ, ಪಿಡಬ್ಲ್ಯುಡಿ ಅಧಿಕಾರಿ ಸಂಜಯ್ ಕುಮಾರ್, ಆರ್.ಆರ್. ಲಾಲ್, ಮಂಜುಷಾ ಮ್ಯಾಥ್ಯು ಅವರು ಇದ್ದರು.

ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಜೀತ್ ಉತ್ತಯ್ಯ ಮತ್ತು ಗೋಯಾಂಕ್ ನಿರೂಪಿಸಿದರು. ಪವನ್ ತಿಮ್ಮಯ್ಯ ವಂದಿಸಿದರು.