ಮಡಿಕೇರಿ, ಡಿ. 23 : ಕೊಡಗು ಜಿಲ್ಲೆಯಲ್ಲಿರುವ ದಲಿತ ಸಮೂಹ, ಬೇರೆ ಬೇರೆ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ಒಂದೇ ವೇದಿಕೆಯಡಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ತಮಗಾಗಿ ಮೀಸಲಿರುವ ಹಕ್ಕುಗಳನ್ನು ಪಡೆಯಲು ಮುಂದಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಕರೆ ನೀಡಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ರಾಜಕೀಯ ಪಕ್ಷಗಳು ಮತ ಚಲಾವಣೆಯಲ್ಲಿ ನಿರ್ಣಾಯಕರಾಗಿರುವ ದಲಿತರನ್ನು ಕಡೆಗಣಿಸಿದ್ದು, ಇದು ಖಂಡನೀಯವೆಂದರು. ಈ ಬೆಳವಣಿಗೆಯ ಬಗ್ಗೆ ಬೇಸರಗೊಂಡಿರುವ ದಲಿತ ಸಮುದಾಯ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವದರ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು, ದಲಿತರೆಲ್ಲರೂ ಒಂದೇ ವೇದಿಕೆಯಡಿ ಮತ ಬಲಪ್ರದರ್ಶನ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.

2010-11 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 73,584 ಪರಿಶಿಷ್ಟ ಜಾತಿ ಹಾಗೂ 58,054 ಮಂದಿ ಪರಿಶಿಷ್ಟ ಪಂಗಡದ ಮಂದಿಯಿದ್ದು, ಒಟ್ಟು 1,23,0638 ಸಂಖ್ಯೆಯಾಗಿರುತ್ತದೆ. 2011 ರ ಒಟ್ಟು ಜನಸಂಖ್ಯೆ 5,54,519 ಆಗಿದ್ದು, ಶೇ.25 ರಷ್ಟು ಮಂದಿ ದಲಿತ ಜನಾಂಗದವರೇ ಆಗಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ದಲಿತ ಜನಾಂಗದವರು ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ ಮಾತ್ರವಲ್ಲ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದಲಿತ ಕಾರ್ಯಕರ್ತರಿಗೆ ಯಾವದೇ ಸ್ಥಾನಮಾನ ಮತ್ತು ಗೌರವ ದೊರೆಯುತ್ತಿಲ್ಲ ಎಂದು ವೀರಭದ್ರಯ್ಯ ಅಸಮಾಧಾನ ವ್ತಕ್ತಪಡಿಸಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಾರದೆ ಇದ್ದಿದ್ದರೆ ಇಂದು ದಲಿತ ವಿದ್ಯಾರ್ಥಿಗಳು ಶಿಕ್ಷಣ,

(ಮೊದಲ ಪುಟದಿಂದ) ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಿಂದ ವಂಚಿತರಾಗುತ್ತಿದ್ದರು. ಅಲ್ಲದೆ ದೇಶದಲ್ಲಿ ಮೀಸಲಾತಿ ವ್ಯವಸ್ಥೆ ಇಲ್ಲದೆ ಹೋಗಿದ್ದಲ್ಲಿ ಯಾವ ರಾಜಕೀಯ ಪಕ್ಷ ಕೂಡ ದಲಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿರಲಿಲ್ಲ ಮತ್ತು ಪಕ್ಷಕ್ಕೂ ಸೇರ್ಪಡೆಗೊಳಿಸಿಕೊಳ್ಳುತ್ತಿರಲಿಲ್ಲ ಎಂದು ವೀರಭದ್ರಯ್ಯ ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ವೀರಾಜಪೇಟೆ ತಾಲೂಕಿನ ಒಟ್ಟು ಜನಸಂಖ್ಯೆ 2,01,431 ರಲ್ಲಿ 53,438 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿ ದ್ದಾರೆ. ಎಲ್ಲಾ ವಿಧದಲ್ಲೂ ತುಳಿತಕ್ಕೊಳ ಗಾಗುತ್ತಿರುವ ದಲಿತರನ್ನು ಪ್ರತಿನಿಧಿಸುವ ಒಬ್ಬ ಜನಪ್ರತಿನಿಧಿಯ ಅಗತ್ಯತೆ ಎದ್ದು ಕಾಣುತ್ತಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ದಲಿತ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಮೂಲಕ ದಲಿತರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಸುಮಾರು ಎಂಟು ಸಾವಿರ ಸದಸ್ಯರುಗಳನ್ನು ಹೊಂದಿದ್ದು, ರಾಜಕೀಯ ರಹಿತವಾಗಿ ದಲಿತರ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎನ್ನುವದನ್ನು ನಾವು ನಿರ್ಧರಿಸುತ್ತೇವೆ ಎಂದರು.

ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯವನ್ನು ಯಾವ ಜನಪ್ರತಿನಿಧಿಯೂ ಪ್ರಶ್ನಿಸುತ್ತಿಲ್ಲ. ವರ್ಷದ ಹಿಂದೆ ನಡೆದ ಮಾದಾಪುರ ಕಾಲೇಜು ಪ್ರಾಂಶುಪಾಲರ ಆತ್ಮಹತ್ಯೆ, ಸಾಲ ಮರುಪಾವತಿಸಲಿಲ್ಲ ವೆಂದು ನಾಯಿಗಳನ್ನು ಬಿಟ್ಟು ಕಾರ್ಮಿಕನನ್ನು ಕಚ್ಚಿಸಿದ ಪ್ರಕರಣ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಸಿಗಲಿಲ್ಲವೆಂದು ದಿವಾಕರ್ ಆರೋಪಿಸಿದರು. ಈ ಬಗ್ಗೆ ಸಮಿತಿಯು ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಲಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಹೆಚ್.ಬಿ.ರವಿ ಹಾಗೂ ತಾಲೂಕು ಸಂಚಾಲಕ ಹೆಚ್.ಎಲ್. ಕುಮಾರ್ ಉಪಸ್ಥಿತರಿದ್ದರು.