ಸೋಮವಾರಪೇಟೆ, ಡಿ.24: ಸೋಮವಾರಪೇಟೆ ತಾಲೂಕಿನ 6 ಹೋಬಳಿಗಳಲ್ಲಿ ಶಾಂತಳ್ಳಿ ಹೋಬಳಿ ಹಲವಾರು ವಿಶೇಷತೆಗಳಿಂದ ಕೂಡಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಹಚ್ಚಹಸಿರಿನ ವನ-ವನ್ಯರಾಶಿಗೆ ಹೊಂದಿ ಕೊಂಡಂತಿರುವ ಶಾಂತಳ್ಳಿ ಹೋಬಳಿಯಲ್ಲಿ ಇತಿಹಾಸ ಪ್ರಸಿದ್ಧ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ಹಾಗೂ ಕುಮಾರಲಿಂಗೇಶ್ವರ ದೇವಾಲಯಗಳ ನೆಲೆಯಾಗಿದ್ದರೆ, ಒಕ್ಕಲಿಗ ಗೌಡ ಜನಾಂಗ ಅಧಿಕವಾಗಿ ನೆಲೆಕಂಡುಕೊಂಡಿರುವ ಈ ಭಾಗದಲ್ಲಿ ಸುಗ್ಗಿ ಹಬ್ಬಗಳೂ ಇತರೆಡೆಗಳಿಗೆ ಮಾದರಿಯಾಗಿದೆ. ಅಲ್ಲದೆ ಶಾಂತಳ್ಳಿ ಹೋಬಳಿ ಗಮನ ಸೆಳೆಯುವದು ಮದ್ಯ ಮಾರಾಟ ಮುಕ್ತÀ ವಿಷಯದಲ್ಲಿ!

ತಾಲೂಕಿನಲ್ಲಿ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬಾ, ಕುಶಾಲನಗರ, ಸುಂಟಿಕೊಪ್ಪ ಹೋಬಳಿಗಳಿಗೆ ಹೋಲಿಸಿದರೆ ಶಾಂತಳ್ಳಿ ಹೋಬಳಿಯಲ್ಲಿ ಇದುವರೆಗೂ ಒಂದೇ ಒಂದು ಮದ್ಯ ಮಾರಾಟ ಅಂಗಡಿ ಸ್ಥಾಪನೆಗೊಂಡಿಲ್ಲ. ಹೌದು, ಈ ಹೋಬಳಿ ಮದ್ಯ ಮಾರಾಟ ಮುಕ್ತದಿಂದಾಗಿ ಇಂದಿಗೂ ‘ಶಾಂತ’ ಹಳ್ಳಿ ತನ್ನ ಹೆಸರಿನಷ್ಟೇ ‘ಶಾಂತ’ವಾಗಿದೆ.., ‘ಪ್ರಶಾಂತ’ವಾಗಿದೆ!

ಸೋಮವಾರಪೇಟೆ ಪಟ್ಟಣದಿಂದ ಯಡೂರು ಮಾರ್ಗ ಮೂಲಕ ಕೇವಲ 10 ಕಿ.ಮೀ. ದೂರದಲ್ಲಿ ಶಾಂತಳ್ಳಿ ಗ್ರಾಮವಿದೆ. ಸಾಂಸ್ಕøತಿಕವಾಗಿಯೂ ಶ್ರೀಮಂತಿಕೆಯನ್ನು ಹೊಂದಿರುವ ಗ್ರಾಮದಲ್ಲಿ ರಾಜಕೀಯ ಪಕ್ಷಗಳ ಘಟಾನುಘಟಿಗಳೂ ಇದ್ದಾರೆ. ಶೇ.80ಕ್ಕೂ ಅಧಿಕ ಒಕ್ಕಲಿಗ ಜನಾಂಗದವರೇ ನೆಲೆಯಾಗಿರುವ ಈ ಗ್ರಾಮ ಹೋಬಳಿ ಕೇಂದ್ರವಾಗಿದೆ.

ನಾಡಕಚೇರಿ, ಗ್ರಾಮ ಪಂಚಾಯಿತಿ, ಕಾರ್ಪೋರೇಷನ್ ಬ್ಯಾಂಕ್ ಸೇರಿದಂತೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್, ಪಶುಚಿಕಿತ್ಸಾಲಯ, ಕೃಷಿ ಇಲಾಖಾ ಕಚೇರಿ, ಜೇನು ಉತ್ಪಾದನಾ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಕುಮಾರಲಿಂಗೇಶ್ವರ ಪ್ರೌಢಶಾಲೆ ಸೇರಿದಂತೆ ಇತರ ಸೌಲಭ್ಯವಿವೆ.

ಸಣ್ಣ ಹಿಡುವಳಿದಾರರೊಂದಿಗೆ ನೂರಾರು ಎಕರೆ

(ಮೊದಲ ಪುಟದಿಂದ) ತೋಟವನ್ನು ಹೊಂದಿರುವ ಬೆಳೆಗಾರರು, ಕೂಲಿ ಕಾರ್ಮಿಕರು ನೆಲೆಸಿರುವ ಶಾಂತಳ್ಳಿ ಹೋಬಳಿಯಲ್ಲಿ ಇದುವರೆಗೂ ಮದ್ಯ ಮಾರಾಟ ಅಂಗಡಿಯಿಲ್ಲ. ಕೊಡಗು ಎಂದಾಕ್ಷಣ ಮದ್ಯಕ್ಕೂ ತನ್ನದೇ ಆದ ಪ್ರಾಶಸ್ತ್ಯ ಇದ್ದೇ ಇದೆ. ಇಲ್ಲಿನ ಸಂಸ್ಕøತಿ, ಆಚಾರ ವಿಚಾರಗಳೊಂದಿಗೂ ಮದ್ಯ ಬೆರೆತಿದೆ. ಬಹುತೇಕ ಪಟ್ಟಣ ಪ್ರದೇಶಗಳು, ಹೋಬಳಿ ಕೇಂದ್ರಗಳಲ್ಲಿ ಮದ್ಯಮಾರಾಟ ಅಂಗಡಿಗಳು ಇದ್ದೇ ಇರುತ್ತವೆ. ಇವುಗಳ ಸಾಲಿನಿಂದ ಹೊರ ನಿಂತಿರುವ ಶಾಂತಳ್ಳಿ ಹೋಬಳಿ ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ.

ಅನ್ಯಮತೀಯರಿಲ್ಲ: ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಶಾಂತಳ್ಳಿ ಗ್ರಾಮ ಪಂಚಾಯಿತಿಗಳು ಒಳಪಡುವ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಕುಂದಳ್ಳಿ, ಬೀದಳ್ಳಿ, ಕೊತ್ನಳ್ಳಿ, ಕುಮಾರಳ್ಳಿ, ಕುಡಿಗಾಣ, ಮಲ್ಲಳ್ಳಿ, ಹೆಮ್ಮನಗದ್ದೆ, ಹರಗ, ಕೂತಿ, ಹೆಗ್ಗಡಮನೆ, ಪುಷ್ಪಗಿರಿ, ಬೆಂಕ್ಯಳ್ಳಿ, ತೋಳೂರು ಶೆಟ್ಟಳ್ಳಿ ಸೇರಿದಂತೆ ಇತರ ಗ್ರಾಮಗಳು ಒಳಪಡಲಿದ್ದು, ಶೇ. 80ರಷ್ಟು ಗೌಡ ಜನಾಂಗದವರಿದ್ದಾರೆ. ಶಾಂತಳ್ಳಿ ಹೋಬಳಿಯ ಮತ್ತೊಂದು ವಿಶೇಷವೆಂದರೆ ಅನ್ಯಮತೀಯರ ಒಂದೇ ಒಂದು ಕುಟುಂಬಗಳೂ ಈ ಭಾಗದಲ್ಲಿಲ್ಲ.

ಈ ಹೋಬಳಿಯಲ್ಲಿ ಶೇ.95 ರಷ್ಟು ಮಂದಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಕಾಫಿ, ಏಲಕ್ಕಿ, ಭತ್ತ, ಕರಿಮೆಣಸು ಸೇರಿದಂತೆ ಸೊಪ್ಪು, ತರಕಾರಿಗಳನ್ನು ಬೆಳೆದು ಜೀವನ ನಿರ್ವಹಿಸುತ್ತಿದ್ದಾರೆ. ಶಾಂತಳ್ಳಿ ಹೋಬಳಿಯಲ್ಲಿ ಕಳೆದ ಜನಗಣತಿ ಪ್ರಕಾರ 4026 ಪುರುಷರು, 4175 ಮಹಿಳೆಯರು ಸೇರಿದಂತೆ ಒಟ್ಟು 8201 ಜನಸಂಖ್ಯೆಯಿದೆ.

ಕಳ್ಳಭಟ್ಟಿಗೆ ಹೆಸರುವಾಸಿ: ಹಿಂದೊಮ್ಮೆ ಶಾಂತಳ್ಳಿ ಹೋಬಳಿ ಎಂದರೆ ಕಳ್ಳ ಭಟ್ಟಿ ತಯಾರಿಕೆಗೆ ಹೆಸರುವಾಸಿಯಾಗಿತ್ತು. ಹೆಚ್ಚಿನ ಮನೆಗಳಲ್ಲಿ ತಾವೇ ಕಳ್ಳಭಟ್ಟಿಯನ್ನು ತಯಾರಿಸುತ್ತಿದ್ದರು. ಅಕ್ಕಪಕ್ಕದ ಊರಿನವರಿಗೂ ಮಾರಾಟ ಮಾಡುತ್ತಿದ್ದರು. ಕ್ರಮೇಣ ಗ್ರಾಮದ ಹೆಸರಿಗೆ ಮಸಿ ಅಂಟಿಸುವ ಕಾರ್ಯಕ್ಕೆ ಯಾರೂ ಮುಂದಾಗಬಾರದು ಎಂದು ಗ್ರಾಮಸ್ಥರೇ ಸಭೆ ನಡೆಸಿ ಕಳ್ಳ ಭಟ್ಟಿ ತಯಾರಿಕೆಗೆ ಅಂಕುಶ ಹಾಕಿದರು. ಗ್ರಾಮಾಭಿವೃದ್ಧಿ ಸಮಿತಿಯ ಮೂಲಕ ಎಲ್ಲರಿಗೂ ಎಚ್ಚರಿಕೆ ನೀಡಿದ ಮೇರೆ ಕಳೆದ 15 ವರ್ಷಗಳಿಂದ ಈ ಭಾಗದಲ್ಲಿ ಕಳ್ಳಭಟ್ಟಿ ತಯಾರಿಕೆ ನಿಂತುಹೋಯಿತು. ಇದರೊಂದಿಗೆ ಅಪರಾಧ ಪ್ರಕರಣ ಗಳೂ ಗಣನೀಯವಾಗಿ ಇಳಿಯಿತು.

ಮದ್ಯ ಮಾರಿದರೆ ದಂಡ: ಕಳ್ಳಭಟ್ಟಿಗೆ ಅಂಕುಶ ಹಾಕಿದ ನಂತರ ಗ್ರಾಮಸ್ಥರೇ ಸೇರಿಕೊಂಡು ಈ ಭಾಗದಲ್ಲಿ ಯಾರೂ ಮದ್ಯ ಮಾರಾಟ ಮಾಡಬಾರದು. ಅಂಗಡಿ, ಮನೆಗಳಲ್ಲಿ ಮಾರಾಟ ಮಾಡಿದರೆ ದಂಡ ವಿಧಿಸುವದು, ಇದಕ್ಕೂ ಬಗ್ಗದಿದ್ದರೆ ಅಬಕಾರಿ ಇಲಾಖೆಗೆ ಊರಿನಿಂದಲೇ ದೂರು ನೀಡುವದು, ಮಾರಾಟ ಮಾಡುವವರನ್ನು ಅಬಕಾರಿ ಇಲಾಖೆಗೆ ಹಿಡಿದು ಕೊಡುವದು ಇತ್ಯಾದಿ ಎಚ್ಚರಿಕೆಗಳನ್ನು ನೀಡಿದ ನಂತರ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿತು.

ಪಂಚಾಯಿತಿಯಿಂದ ಅನುಮತಿಯಿಲ್ಲ: ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸಲು ಕಳೆದ 10 ವರ್ಷಗಳ ಹಿಂದೆಯೇ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಅಂದು ಪಂಚಾಯಿತಿ ಅಧ್ಯಕ್ಷರಾಗಿದ್ದ ಶಿವಣ್ಣ ಮತ್ತು ಇತರ ಸದಸ್ಯರು ಇದಕ್ಕೆ ಅನುಮತಿ ನೀಡಲಿಲ್ಲ. ಅದರ ಪರಿಣಾಮ ಇಂದಿಗೂ ಈ ಭಾಗದಲ್ಲಿ ಮದ್ಯ ಮಾರಾಟದ ಮಳಿಗೆ ತಲೆ ಎತ್ತಲಿಲ್ಲ.

ಹೋಂಸ್ಟೇಗಳ ಯುಗ: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿಯಲ್ಲಿರುವ ಜಲಪಾತ ಇತ್ತೀಚೆಗೆ ಹೊರ ಪ್ರಪಂಚಕ್ಕೆ ಕಂಡುಬಂದು ಪ್ರವಾಸಿಗರನ್ನು ಆಕರ್ಷಿಸಲು ಪ್ರಾರಂಭಿಸುತ್ತಿದ್ದಂತೆ ಈ ಭಾಗದಲ್ಲಿ ಹೋಂ ಸ್ಟೇಗಳು ಹೆಚ್ಚಾಗಿ ತಲೆ ಎತ್ತಲಾರಂಬಿಸಿವೆ. ಶಾಂತಳ್ಳಿ ಭಾಗದಲ್ಲಿ 10ಕ್ಕೂ ಅಧಿಕ ಹೋಂ ಸ್ಟೇಗಳು ನೆಲೆನಿಂತಿದ್ದು, ಒಂದಷ್ಟು ಮಂದಿಗೆ ಆರ್ಥಿಕತೆಯ ಮೂಲವಾಗಿದೆ.

ವೈನ್‍ಗಳಿಗೆ ಬೇಡಿಕೆ: ಈ ಭಾಗದಲ್ಲಿ ಉತ್ಕøಷ್ಟ ಗುಣಮಟ್ಟದ ಸ್ವಾಧಿಷ್ಟ ಜೇನಿನೊಂದಿಗೆ ವೈನ್‍ಗಳ ತಯಾರಿಕೆಯೂ ಹೆಚ್ಚಿದೆ. ವಿವಿಧ ಬಗೆಯ ವೈನ್‍ಗಳನ್ನು ತಯಾರಿಸಿ ಪ್ರವಾಸಿಗರಿಗೆ ಮಾರಾಟ ಮಾಡುವ ಮೂಲಕ ಒಂದಿಷ್ಟು ಸಂಪಾದನೆಯ ಮೂಲವಾಗಿ ಅವಲಂಬಿತವಾಗಿದೆ. ಪ್ರವಾಸಿಗರು ಹೋಂ ಸ್ಟೇಗಳಲ್ಲಿ ತಂಗಿದರೆ ಮದ್ಯವನ್ನು ಹೊರಭಾಗದಿಂದಲೇ ತೆಗೆದುಕೊಂಡು ಹೋಗಬೇಕಿದೆ. ಸ್ಥಳೀಯವಾಗಿ ಬಗೆ ಬಗೆಯ ವೈನ್‍ಗಳು ಲಭ್ಯವಿವೆ.

ತೋಳೂರುಶೆಟ್ಟಳ್ಳಿಯಲ್ಲಿ ಕೆಲ ವರ್ಷಗಳ ಹಿಂದೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಗ್ರಾಮಸ್ಥರ ಎಚ್ಚರಿಕೆಯ ನಂತರ ಇದಕ್ಕೆ ಕಡಿವಾಣ ಬಿದ್ದಿದೆ. ಈ ಭಾಗದವರು ಮದ್ಯ ಬೇಕಿದ್ದರೆ ಸೋಮವಾರಪೇಟೆ ಪಟ್ಟಣಕ್ಕೆ ಬರಬೇಕಿದೆ. ಮದ್ಯಕ್ಕಾಗಿ 10ರಿಂದ 15 ಕಿ.ಮೀ. ದೂರಕ್ಕೆ ಬರಬೇಕಿದ್ದರೂ ಸಹ ಸ್ಥಳೀಯವಾಗಿ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡದಿರುವದು ಶ್ಲಾಘನೀಯವೇ ಸರಿ.

ಒಟ್ಟಾರೆ ಜಿಲ್ಲೆಯ ಇತರೆಡೆಗಳಿಗೆ ಹೋಲಿಸಿದರೆ ಶಾಂತಳ್ಳಿ ಹೋಬಳಿ ಯಾದ್ಯಂತ ಕುಡಿತದ ಕಾರಣಕ್ಕಾಗಿ ಅಪರಾಧಗಳು ನಡೆಯುವ ಪ್ರಮಾಣವೂ ಕಡಿಮೆ ಇದೆ. ಕೃಷಿ ಪ್ರಧಾನ ಪ್ರದೇಶವಾಗಿರುವ ಈ ಮೂರೂ ಗ್ರಾ.ಪಂ.ಗಳು ಅಕ್ರಮ ಮದ್ಯಕ್ಕೂ ಕಡಿವಾಣ ಹಾಕುವ ಮೂಲಕ ಗ್ರಾಮದ ಕಟ್ಟುಪಾಡುಗಳಿಗೆ ಒಳಪಟ್ಟು ನೆಮ್ಮದಿಯ ತಾಣವಾಗಿವೆ. ಇದು ಹೀಗೆಯೇ ಮುಂದುವರೆಯಲಿ ಎಂಬ ಆಶಯ ಎಲ್ಲರದ್ದು.

- ವಿಜಯ್ ಹಾನಗಲ್