ಮಡಿಕೇರಿ, ಡಿ. 23: ಭಾರತದ ಉದ್ದಗಲಕ್ಕೂ ಕಳೆದ 34 ವರ್ಷ ಗಳಿಂದ ಧರ್ಮಗ್ರಂಥ ಭಗವದ್ಗೀತೆಯ ವ್ಯಾಪಕ ಪ್ರಚಾರದೊಂದಿಗೆ ಅಂತರ್ರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘವು ಹಮ್ಮಿಕೊಂಡಿರುವ ಯಾತ್ರೆಯು, ಪ್ರಥಮವಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿದೆ.ಮಡಿಕೇರಿಯ ಇಸ್ಕಾನ್ ಬಳಗದೊಂದಿಗೆ ಸ್ಥಳೀಯರು ಇಂದು ಮಧ್ಯಾಹ್ನ ರಥವನ್ನು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬರಮಾಡಿ ಕೊಂಡು ನಗರದ ಬಾಲಭವನ ಆವರಣದಲ್ಲಿ ತಂಗಿದೆ.

(ಮೊದಲ ಪುಟದಿಂದ) ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರ ಮೂರ್ತಿಯೊಂದಿಗೆ ಐದು ಎತ್ತುಗಳನ್ನು ಒಳಗೊಂಡಿರುವ ಈ ಯಾತ್ರೆಯಲ್ಲಿ ಸಂಸ್ಥೆಯ ಅನುಯಾ ಯಿಗಳು ಕೂಡ ಆಗಮಿಸಿದ್ದಾರೆ.

1984ರಲ್ಲಿ ಹರಿದ್ವಾರದಿಂದ ಪ್ರಾರಂಭಗೊಂಡಿರುವ ಯಾತ್ರೆ ಭಾರತ ಪ್ರದಕ್ಷಿಣೆಯನ್ನು ಐದು ಬಾರಿ ಪೂರೈಸಿದ್ದು, ಪ್ರಸಕ್ತ ಆರನೇ ಯಾತ್ರೆಯು ಕಾವೇರಿ ನಾಡಿಗೂ ಆಗಮಿಸಿದೆ. ಉತ್ತರದ ದ್ವಾರಕಾ, ಕುರುಕ್ಷೇತ್ರ, ಬದರಿ, ವೃಂದಾವನ, ಮಾಯಾಪುರಿ, ಜಗನ್ನಾಥಪುರಿ, ತಿರುಪತಿ, ಶ್ರೀರಂಗಂ, ರಾಮೇಶ್ವಂ, ತಿರುವನಂತಪುರ, ಗುರುವಾಯೂರು, ಉಡುಪಿ ಮುಂತಾದೆಡೆಗಳಲ್ಲಿ ಸಂಚರಿಸುತ್ತಾ ಕೊಡಗು ಪ್ರವೇಶಿಸಿದೆ.

ಇಂದು ಮತ್ತು ನಾಳೆ ಬಾಲಭವನ ಬಳಿ ರಥ ತಂಗಲಿದ್ದು, ನಗರದÀ ಪೇಟೆ ಶ್ರೀರಾಮ ಮಂದಿರದಿಂದ ಗಾಂಧಿಮೈದಾನಕ್ಕೆ ತೆರಳಿ ಇಸ್ಕಾನ್ ಉತ್ಸವದಲ್ಲಿ ಪಾಲ್ಗೊಳ್ಳಲಿದೆ. ತಾ. 24ರಂದು ಸಂಜೆ 3 ಗಂಟೆಗೆ ಇಸ್ಕಾನ್ ಬಳಗ ನಗರ ಸಂಕೀರ್ತನೆ ನಡೆಸಲಿದೆ ಎಂದು ಬಳಗದ ಪ್ರಮುಖರು ತಿಳಿಸಿದ್ದಾರೆ. ಈ ಯಾತ್ರೆಯಲ್ಲಿ ಗುಜರಾತ್‍ನ ಅದ್ಭುತ ಕಾಂಕ್ರೀಜ್ ತಳಿಯ ಎತ್ತುಗಳಾದ ನಂದಕಿಶೋರ, ಕಾಲಿಯಾ, ನರಸಿಂಹ, ಕೃಷ್ಣ, ಜಯ ಆಕರ್ಷಣೆಯ ಕೇಂದ್ರಬಿಂದುಗಳಾಗಿ ಗಮನ ಸೆಳೆಯುತ್ತಿವೆ.

ತಾ. 25ರಂದು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಹರೇ ಕೃಷ್ಣ ಉತ್ಸವವನ್ನು ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಡಿಕೇರಿ ಇಸ್ಕಾನ್ ಪ್ರಮುಖರಾದ ಚೈತನ್ಯದಾಸ್ ಪ್ರಭು ತಿಳಿಸಿದ್ದಾರೆ.