ಮಡಿಕೇರಿ, ಡಿ. 26: 1997ರಲ್ಲಿ ಜಿಲ್ಲೆಯಲ್ಲಿ ಕುತೂಹಲ ಕೆರಳಿಸಿದ್ದ ನಕಲಿ ಛಾಪಾ ಕಾಗದ ಪ್ರಕರಣ 18 ವರ್ಷಗಳ ಸುದೀರ್ಘ ವಾದ ವಿವಾದಗಳಿಂದ ಇಂದು ಮುಕ್ತಾಯಗೊಂಡಿದ್ದು, ಪ್ರಕರಣದ ಎರಡನೆಯ ಆರೋಪಿ ಹಿರಿಯ ವಕೀಲ ಬಿ.ಎ. ಮಾಚಯ್ಯ ಅವರಿಗೆ 3 ವರ್ಷಗಳ ಸಜೆ ಹಾಗೂ 25 ಸಾವಿರ ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್‍ರವರು ಆದೇಶ ಹೊರಡಿಸಿದ್ದು, ಮೇಲ್ಮನವಿ ಸಲ್ಲಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.ಸರಕಾರದ ಹಿಂದಿನ ವ್ಯವಸ್ಥೆಯಲ್ಲಿ ನೊಂದಾವಣಿಗೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳ ಮೂಲಕ ಛಾಪಾ ಕಾಗದಗಳನ್ನು ಕಠಿಣ ನಿಯಮಗಳಿಲ್ಲದೆ ಮಾರಾಟ ಮಾಡಲಾಗುತ್ತಿತ್ತು. ತೊಂಭತ್ತರ ದಶಕದಲ್ಲಿ ರಾಜ್ಯದಾದ್ಯಂತ ನಕಲಿ ಛಾಪಾ ಕಾಗದಗಳನ್ನು ತಯಾರು ಮಾಡಿ ಗ್ರಾಹಕರಿಗೆ ಮಾರಾಟ ಮಾಡುವ ಬೃಹತ್ ಜಾಲದ ಪ್ರಕರಣ ಬಯಲಿಗೆ ಬಂದಿತ್ತು. ಕೊಡಗಿನಲ್ಲೂ ಈ ಜಾಲ ಹರಡಿರುವ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮಡಿಕೇರಿಯ ಬಾಸ್ಕರ್ ನಾಯರ್ ಎಂಬ ವ್ಯಕ್ತಿ ಹಾಗೂ ವಕೀಲ ಬಿ.ಎ. ಮಾಚಯ್ಯ ಇವರುಗಳು ಈ ಜಾಲದ ಪ್ರಮುಖ ವ್ಯಕ್ತಿಗಳೆಂದು ಗುರುತಿಸಿದ್ದರು. 1997ರಲ್ಲಿ ಇವರಿಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ನಗರ ಪೊಲೀಸ್ ಠಾಣೆ ಅಧಿಕಾರಿಗಳು ವಂಚನೆ, ನಕಲಿ ಸ್ಟಾಂಪ್ ತಯಾರಿಕೆ ಮತ್ತು ಶೇಖರಣೆ, ಅವುಗಳ ಮಾರಾಟ, ತಯಾರಿಕೆಗೆ ಅವಶ್ಯವಿರುವ ವಸ್ತುಗಳ ಉತ್ಪಾದನೆ ಹಾಗೂ ಇತರ ಐಪಿಸಿಗಳನ್ನೂ ಪ್ರಥಮ ವರ್ತಮಾನ ವರದಿಯಲ್ಲಿ ಉಲ್ಲೇಖಿಸಿದ್ದರು. 1999ರಲ್ಲಿ ಮೇಲಿನ

(ಮೊದಲ ಪುಟದಿಂದ) ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಗೊಂಡಿತ್ತು.

ಪ್ರಕರಣದ ವಾದ ವಿವಾದ ನ್ಯಾಯಾಲಯದಲ್ಲಿ ಆರಂಭಗೊಂಡ ಬಳಿಕ ಪ್ರಥಮ ಆರೋಪಿ ಭಾಸ್ಕರ್ ನಾಯರ್ ನಾಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎರಡನೇ ಆರೋಪಿ ಬಿ.ಎ. ಮಾಚಯ್ಯ ಅವರ ವಿಚಾರಣೆಯನ್ನು ಪ್ರತ್ಯೇಕವಾಗಿ ಆರಂಭಿಸಲಾಯಿತು. ಸ್ವತಃ ಮಾಚಯ್ಯ ಅವರೇ ತನ್ನ ಪರ ವಾದಿಸ ತೊಡಗಿದ್ದರು. 18 ವರ್ಷಗಳ ಸುದೀರ್ಘ ವಿಚಾರಣೆಯಲ್ಲಿ ಆರೋಪಿ ಸೇರಿದಂತೆ 132 ಮಂದಿ ಸಾಕ್ಷಿಗಳು ನ್ಯಾಯಾಲಯದ ಕಟಕಟೆ ಹತ್ತಿದ್ದರು.

ತೀರಾ ಕಗ್ಗಂಟಾಗಿದ್ದ ಈ ಪ್ರಕರಣವನ್ನು ಇದುವರೆಗೂ ಮುಂದೂಡುತ್ತಾ ಬರಲಾಗಿದ್ದು, ಪ್ರಸ್ತುತ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪವನೇಶ್ ಅವರು ಕೈಗೆತ್ತಿಕೊಂಡು ಇಂದು ಅಂತಿಮಗೊಳಿಸಿದರು.

ಇಂದು ಬೆಳಿಗ್ಗೆ ಆರೋಪಿ ಬಿ.ಎ. ಮಾಚಯ್ಯ ಅವರು ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಅಪರಾಹ್ನ ಪ್ರಕಟಿಸುವದಾಗಿ ತಿಳಿಸಿದರು.

ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವದಕ್ಕೆ ಮೊದಲು ಆರೋಪಿಯ ಅಭಿಪ್ರಾಯವನ್ನು ಪಡೆಯುವ ಸೆಕ್ಷನ್ 235(2)ರ ಅನ್ವಯ ನ್ಯಾಯಾಲಯ ಆರೋಪಿಯ ಹೇಳಿಕೆಯನ್ನು ಕೇಳಿತು. ಈ ಸಂದರ್ಭ ಆರೋಪಿ ಪರ ವಿಷಯ ಮಂಡಿಸಿದ ವಕೀಲ ಪಿ. ಕೃಷ್ಣಮೂರ್ತಿ ಅವರು ಸಜೆಯ ಅವಧಿಯನ್ನು ಕಡಿಮೆ ಮಾಡುವಂತೆ ಕೋರಿದರು. ಆರೋಪಿ ಹಿರಿಯ ನ್ಯಾಯವಾದಿಯಾಗಿದ್ದು, ಹಲವು ಯುವ ವಕೀಲರನ್ನು ಈ ಕ್ಷೇತ್ರದಲ್ಲಿ ಬೆಳೆಸಿದ ಕೀರ್ತಿಗೆ ಪಾತ್ರ ರಾಗಿದ್ದಾರೆಂದು ವಕೀಲರು ಸುಪ್ರೀಂ ಕೋರ್ಟ್‍ನ ತೀರ್ಪುಗಳನ್ನೂ ಉಲ್ಲೇಖಿಸಿದರು.

ಆ ಬಳಿಕ ತೀರ್ಪಿತ್ತ ನ್ಯಾಯಾಧೀಶರು ಆರೋಪಿಗೆ ಸೆಕ್ಷನ್ 258 (ನಕಲಿ ಸ್ಟಾಂಪ್ ಮಾರಾಟ)ರ ಅಡಿಯಲ್ಲಿ 3 ವರ್ಷ ಶಿಕ್ಷೆ ಹಾಗೂ 7500 ದಂಡ, ಸೆಕ್ಷನ್ 259 (ನಕಲಿ ಸ್ಟಾಂಪ್‍ಗಳ ಶೇಖರಣೆ) ಅಡಿಯಲ್ಲಿ 3 ವರ್ಷ ಶಿಕ್ಷೆ ಹಾಗೂ 7500 ದಂಡ ಹಾಗೂ ಸೆಕ್ಷನ್ 420 (ವಂಚನೆ) ಅಡಿ 2 ವರ್ಷ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದರು. ಮೂರು ಶಿಕ್ಷೆಯನ್ನೂ ಏಕಕಾಲಕ್ಕೆ ಅನುಭವಿಸುವದರಿಂದ ಆರೋಪಿಗೆ ಒಟ್ಟು ಮೂರು ವರ್ಷ ಮಾತ್ರ ಸಜೆ ವಿಧಿಸಲಾಯಿತು.

ಯಾವದೇ ತೀರ್ಪಿನಲ್ಲಿ 3 ವರ್ಷ ದವರೆಗೆ ಶಿಕ್ಷೆ ವಿಧಿಸಿದರೆ ಆರೋಪಿಗೆ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವ ದರಿಂದ ಆರೋಪಿ ಪರ ವಕೀಲ ಕೃಷ್ಣಮೂರ್ತಿ ಅವರ ಮನವಿಯಂತೆ ಸ್ವಂತ ಜಾಮೀನು ನೀಡಲಾಗಿ ನಾಳೆ ಮತ್ತೊಬ್ಬರ ಭದ್ರತೆ ದಾಖಲೆ ಮೂಲಕ ಜಾಮೀನು ಪಡೆಯಲು ನಿರ್ದೇಶಿಸಲಾಯಿತು.

ಪೊಲೀಸರು ಆರೋಪಿಸಿದ್ದ ಸೆಕ್ಷನ್ 255 (ನಕಲಿ ಸ್ಟಾಂಪ್ ಮಾಡುವದು) 256 (ಅದಕ್ಕೆ ಸಂಬಂಧಿತ ವಸ್ತುಗಳ ಶೇಖರಣೆ), 467 (ಪ್ರಮುಖ ದಾಖಲೆಗಳ ನಕಲು) 468 (ವಂಚನೆ ಮಾಡಲು ನಕಲು ಮಾಡುವದು) 472 (ನಕಲಿ ಸೀಲುಗಳು) ಹಾಗೂ 506 (ಕೊಲೆ ಬೆದರಿಕೆ) ಇವುಗಳಿಂದ ಆರೋಪಿ ಯನ್ನು ಬಿಡುಗಡೆಗೊಳಿಸಲಾಗಿದೆ.