ಮಡಿಕೇರಿ, ಡಿ. 26: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸರಕಾರ ನಾಮನಿರ್ದೇಶನ ಮಾಡಿದ್ದ ನೂತನ ಸದಸ್ಯರಾದ ಸುಳ್ಯದ ನ್ಯಾಯವಾದಿ ಬಿ.ಎಸ್. ಶರೀಫ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ವೈಯಕ್ತಿಕ ಕಾರಣ ಹಾಗೂ ಯಾರ ಮನಸ್ಸಿಗೂ ಇರಿಸು ಮುರಿಸು ಉಂಟಾಗಿ ತೊಂದರೆಯಾಗಬಾರದು, ನಾವೆಲ್ಲರೂ ಒಂದಾಗಿ ಬಾಳಿ ಪರಸ್ಪರ ನಂಬಿಕೆ, ಭಾಷೆ, ಸಂಸ್ಕøತಿಗೆ ಗೌರವ ನೀಡೋಣ ಎಂದು ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿರುವದಾಗಿ ಅಕಾಡೆಮಿ ನೂತನ ಅಧ್ಯಕ್ಷ ಪಿ.ಸಿ. ಜಯರಾಮ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಹಿಂದಿನ ಅವಧಿಯಲ್ಲೂ ಅನ್ಯ ಭಾಷಿಕರನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ಸುಳ್ಯ ಭಾಗದಲ್ಲಿ ವಿರೋಧ, ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶರೀಫ್ ಅವರು ಯಾವದೇ ಸಮಸ್ಯೆ ಉಂಟಾಗಬಾರದೆಂಬ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಅಕಾಡೆಮಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಶರೀಫ್ ಗೈರು ಹಾಜರಾಗಿದ್ದರು.