ಗೋಣಿಕೊಪ್ಪಲು, ಡಿ. 26: ನಾಡಿನ ಅನ್ನದಾತನ ಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವರ್ಷ ಪೂರ್ತಿ ಬೆವರು ಸುರಿಸಿ ದುಡಿದ ರೈತನ ಫಸಲು ಕೈ ಸೇರುವಷ್ಟರಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಾರದ ಪರಿಸ್ಥಿತಿಯಲ್ಲಿ ರೈತ ಕಂಗಾಲಾಗಿದ್ದಾನೆ. ಈ ಬಾರಿ ದ.ಕೊಡಗಿನ ವಿವಿಧ ಭಾಗಗಳಲ್ಲಿ ಗಜಪಡೆಯ ಸದ್ದು ಜೋರಾಗಿದ್ದು ಅರಣ್ಯದಿಂದ ರಾಜಾರೋಷವಾಗಿ ನಾಡಿನತ್ತ ಆಗಮಿಸುತ್ತಿರುವ ಕಾಡಾನೆಯ ಹಿಂಡುಗಳು ಅರಣ್ಯ ಸಮೀಪವಿರುವ ರೈತರ ಗದ್ದೆ, ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಬಂದಿರುವ ಫಸಲನ್ನು ಸಂಪೂರ್ಣವಾಗಿ ನೆಲಸಮ ಮಾಡುತ್ತಿವೆ. ಇತ್ತೀಚೆಗೆ ಈ ಕಾಡಾನೆಯ ಹಿಂಡು ಕುರ್ಚಿ, ಬೀರುಗ ಹಾಗೂ ವೆಸ್ಟ್ ನೆಮ್ಮಲೆಯ ಭಾಗದಲ್ಲಿ ಗುಂಪು ಗುಂಪಾಗಿ ಸಂಚರಿಸುತ್ತಿದ್ದು ಪ್ರತಿ ದಿನ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದವು. ಈ ಬಗ್ಗೆ ‘ಶಕಿ’್ತ ಸಮಗ್ರ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು.

ಕುರ್ಚಿ ಗ್ರಾಮದ ರೈತರಾದ ವಿಧವೆ ಮಹಿಳೆ ಅಜ್ಜಮಾಡ ಪೊನ್ನಮ್ಮ ಎಂಬವರ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಕಾಡಾನೆಯ ಹಿಂಡು ಸಂಪೂರ್ಣ ವಾಗಿ ಹಾಳು ಮಾಡಿ ತೆರಳಿತ್ತು. ಇದರಿಂದ ರೈತ ಮಹಿಳೆ ನೊಂದಿದ್ದಳು. ಇಲ್ಲಿಯ ತನಕ ಸಂಬಂಧಿಸಿದ ಅಧಿಕಾರಿಗಳು ನಷ್ಟ ಪರಿಹಾರ ವಿತರಿಸಲಿಲ್ಲ. ಸಂಕಷ್ಟದಲ್ಲಿದ್ದ ವಿಧವೆ ಮಹಿಳೆ ಊಟಕ್ಕೂ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಳು.

ಸುದ್ದಿ ತಿಳಿದ ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಪದಾಧಿಕಾರಿಗಳು ಕುರ್ಚಿ ಗ್ರಾಮಕ್ಕೆ ತೆರಳಿ ಫಸಲು ನಷ್ಟಗೊಂಡ ಭತ್ತದ ಗದ್ದೆಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸಂಕೇತ್ ಪೂವಯ್ಯ ರೈತ ಮಹಿಳೆ ಅಜ್ಜಮಾಡ ಪೊನ್ನಮ್ಮ ಅವರಿಗೆ ರೂ. 25,000 ವೈಯಕ್ತಿಕ ಪರಿಹಾರ ವಿತರಿಸಿದರು. ಸ್ಥಳದಲ್ಲಿದ್ದ ರೈತ ಮಹಿಳೆಯೊಂದಿಗೆ ಮಾಜಿ ಪ್ರಧಾನ ಮಂತ್ರಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಮಾತನಾಡಿ, ಮುಂದಿನ ದಿನದಲ್ಲಿ ಜಿಲ್ಲೆಗೆ ಆಗಮಿಸುವ ಸಂದರ್ಭ ರೈತರನ್ನು ಭೇಟಿ ಮಾಡುವದಾಗಿ ಹಾಗೂ ಈ ಬಗ್ಗೆ ಮುಂದಿನ ವಿಧಾನ ಸಭೆಯಲ್ಲಿ ರೈತರ ಸಂಕಷ್ಟದ ಬಗ್ಗೆ ಚರ್ಚಿಸುವದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ರೈತರು ದಂಗೆ ಏಳುವ ಸಮಯ ದೂರವಿಲ್ಲ. ಅನ್ನದಾತ ಇಂದು ಅನಾಥವಾಗಿದ್ದಾನೆ. ಸಿದ್ದರಾಮಯ್ಯ

(ಮೊದಲ ಪುಟದಿಂದ) ಅವರ ಸಾಧನಾ ಸಮಾವೇಶ ಕೇವಲ ಮಾತಿನಲ್ಲಿ ಮಾತ್ರ ತೃಪ್ತಿ ಆಗುತ್ತಿದೆ. ಜಿಲ್ಲೆಯ ರೈತರ ಕಣ್ಣೀರನ್ನು ಒರೆಸುವ ಸರ್ಕಾರ ಬರಲು ಇನ್ನು ನಾಲ್ಕು ತಿಂಗಳು ಕಾಯಬೇಕಾಗಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಕುಮಾರಸ್ವಾಮಿಯವರಿಂದ ಮಾತ್ರ ಸಾಧ್ಯ ಎಂದರು.

ಮಾಜಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತನಾಡಿ, ರೈತರ ಸಂಕಷ್ಟವನ್ನು ಆಲಿಸುವ ಸರ್ಕಾರ ಬರಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಎಸ್.ಹೆಚ್. ಮತೀನ್ ಮಾತನಾಡಿ, ಜೆಡಿಎಸ್ ಅಧಿಕಾರ ಇಲ್ಲದಿದ್ದರೂ ರೈತರ ಸಂಕಷ್ಟಕ್ಕೆ ಧಾವಿಸಿ ವೈಯಕ್ತಿಕವಾಗಿ ಸಹಾಯ ಹಸ್ತ ನೀಡುತ್ತಿದೆ ಎಂದರು.

ಸ್ಥಳದಲ್ಲಿ ಜೆಡಿಎಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಕಲಿಯಂಡ ಸಿ. ನಾಣಯ್ಯ, ಕೃಷಿ ವಿಭಾಗದ ಜಿಲ್ಲಾಧ್ಯಕ್ಷ ಮಚ್ಚಮಾಡ ಮಾಚಯ್ಯ, ಯುವ ಜನತಾದಳದ ಉಪಾಧ್ಯಕ್ಷ ಆರ್.ಎ. ಸಕ್ಲೇನ್, ಕಾಕೋಟುಪರಂಬು ಹೋಬಳಿ ಅಧ್ಯಕ್ಷ ಅಮ್ಮಂಡ ಎನ್. ವಿವೇಕ್, ಕಾರ್ಮಿಕ ಘಟಕದ ಅಧ್ಯಕ್ಷ ಪರಮಾಲೆ ಎಂ ಗಣೇಶ್, ತಾಲೂಕು ಉಪಾಧ್ಯಕ್ಷ ಎಸ್.ಎಸ್. ಶಿವ ನಂಜಪ್ಪ, ಅಮ್ಮತ್ತಿ ಸ್ಥಾನೀಯ ಅಧ್ಯಕ್ಷ ಮಜೀದ್, ಅಲ್ಪಸಂಖ್ಯಾತ ಉಪಾಧ್ಯಕ್ಷ ಕೆ.ಎ. ಅಯೂಬ್, ಮುಖಂಡರಾದ ರೆನ್ನಿ ಪಿ.ವಿ., ಅಶ್ರಫ್ ಅಲಿ, ಎಂ.ಕೆ. ನೂರ್ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಸಿದ್ದು, ಅಜ್ಜಮಾಡ ಮೋಹನ್, ಬಾಚಮಾಡ ಭವಿಕುಮಾರ್, ಐಯ್ಯಮಾಡ ಹ್ಯಾರಿ ಸೋಮೇಶ್, ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಮುಂತಾದವರು ಹಾಜರಿದ್ದರು.

- ಹೆಚ್.ಕೆ. ಜಗದೀಶ್