ಶ್ರೀಮಂಗಲ, ಡಿ. 23: ಪೊನ್ನಂಪೇಟೆ ಸೇರಿದಂತೆ ಹಲವು ತಾಲೂಕು ರಚನೆಯ ಬೇಡಿಕೆ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಬಗ್ಗೆ ಸರ್ಕಾರ ಜಿಲ್ಲಾದಿಕಾರಿಗಳಿಂದ ವರದಿ ಕೇಳಿದ್ದು, ವರದಿ ಬಂದ ಬಳಿಕ ಸರ್ಕಾರದ ನಿಲುವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸದ್ಯದಲ್ಲಿಯೇ ಪ್ರಕಟಿಸಲಿದ್ದ್ದಾರೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.ಪೊನ್ನಂಪೇಟೆಯ ನೂತನ ನ್ಯಾಯಾಲಯ ಉದ್ಘಾಟನೆಗೆ ಆಗಮಿಸಿದ ಸಚಿವರನ್ನು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ನಿಯೋಗ ಭೇಟಿ ಮಾಡಿ ತಾಲೂಕು ರಚನೆಗೆ ಮನವಿ ಸಲ್ಲಿಸಿದ ಸಂದರ್ಭ ಸಚಿವರು ಈ ಮೇಲಿನ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭ ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಸಂಚಾಲಕ ಮಾಚಿಮಾಡ ಎಂ.ರವೀಂದ್ರ ಅವರು ತಾಲೂಕು ರಚನೆಗೆ ಕಳೆದ 53 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದು, ತಾಲೂಕು ರಚನೆಗೆ ಎಲ್ಲಾ ಅರ್ಹತೆ ಇರುವ ಪೊನ್ನಂಪೇಟೆ ತಾಲೂಕನ್ನು ರಚನೆ ಮಾಡಬೇಕು. ಈ ಹಿಂದೆ ಪೊನ್ನಂಪೇಟೆ ಕೇಂದ್ರವಾಗಿ ಕ್ಗ್ಗಟ್ಟ್ನಾಡ್ ಹೆಸರಿನಲ್ಲಿ ತಾಲೂಕು ಇದ್ದ ಬಗ್ಗೆ ಸಚಿವರ ಗಮನ ಸೆಳೆದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಕೈಗಾರಿಕ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಹೈಕೋರ್ಟ್ ವಕೀಲ ಚಂದ್ರಮೌಳಿ, ಜಿ.ಪಂ. ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಪದಾಧಿಕಾರಿಗಳಾದ ಚೆಪ್ಪುಡೀರ ಸೋಮಯ್ಯ, ಮತ್ರಂಡ ಅಪ್ಪಚ್ಚು, ಚೆಪ್ಪುಡೀರ ಪೊನ್ನಪ್ಪ, ಮಲ್ಲಮಾಡ ಪ್ರಭು ಪೂಣಚ್ಚ, ಎರಮು ಹಾಜಿ, ಮಳವಂಡ ಅರವಿಂದ್, ಅಡ್ಡಂಡ ಕಾರ್ಯಪ್ಪ ಮತ್ತಿತರರು ಹಾಜರಿದ್ದರು.