ಸೋಮವಾರಪೇಟೆ, ಡಿ. 23: ಬೆಳಗ್ಗಿನ ಜಾವ ಮನೆಯೊಳಗಿನಿಂದ ಮಹಡಿ ಮೆಟ್ಟಿಲು ಇಳಿದು ಅಂಗಳಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ ಆ ವ್ಯಕ್ತಿಯ ಹತ್ಯೆಗೆ ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿರುವ ಭಯಾನಕ ಘಟನೆ ಇಂದು ಮುಂಜಾವಿನ ಸುಮಾರು 5 ಗಂಟೆಯ ಆಸುಪಾಸಿನಲ್ಲಿ ಸಂಭವಿಸಿದೆ.

ಮಾದಾಪುರದ ಇಗ್ಗೋಡ್ಲು ನಿವಾಸಿ ಕಾಳಚಂಡ ಉತ್ತಯ್ಯ ಎಂಬವರ ಪುತ್ರ ರಂಜನ್ ಪೂವಯ್ಯ (47) ಎಂಬವರೇ ಗುಂಡೇಟಿನಿಂದ ಕೊಲೆಗೀಡಾದ ದುರ್ದೈವಿ. ಇಂದು ಬೆಳಗ್ಗಿನ ಜಾವದಲ್ಲಿ ಬೇಗನೆ ಎದ್ದಿದ್ದ ರಂಜನ್ ಪೂವಯ್ಯ, ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ತಯಾರಿಯೊಂದಿಗೆ ತನ್ನ ಜೀಪುವಿಗೆ ಮನೆಯೊಳಗೆ ಇಟ್ಟುಕೊಂಡಿದ್ದ ಕ್ಯಾನ್‍ನಲ್ಲಿದ್ದ ಡೀಸೆಲ್ ಹಾಕಲೆಂದು ತೆಗೆದುಕೊಂಡು ಹೊರಟಿದ್ದಾಗಿ ಗೊತ್ತಾಗಿದೆ.

ಮೂಲತಃ ಮುಕ್ಕೋಡ್ಲು ಗ್ರಾಮದವರಾದ ಇವರು, ಮಾದಾಪುರ ಶಾಲೆಯ ಬಳಿ ಇಗ್ಗೋಡ್ಲುವಿನ ಚಂಗಪ್ಪ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದು, ವಾಸವಿದ್ದ ಮನೆಯ ಮಹಡಿ ಮೆಟ್ಟಿಲುಗಳನ್ನು ಇಳಿದು ಅಂಗಳಕ್ಕೆ ಬರುವಷ್ಟರಲ್ಲಿ ಗುಂಡಿನ ಧಾಳಿ ನಡೆದಿದೆ. ಗುಂಡಿನ ಶಬ್ಧ ಕೇಳಿ ರಂಜನ್ ಪೂವಯ್ಯ ಪತ್ನಿ

ಶಾಂತಿ ಕೆಳಗಿಳಿದು ಬರುವಷ್ಟರಲ್ಲಿ ಗಾಯಾಳು ರಕ್ತದ ಮಡುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ರೆನ್ನಲಾಗಿದೆ.

(ಮೊದಲ ಪುಟದಿಂದ) ಕೆಲವೇ ಕ್ಷಣದಲ್ಲಿ ಘಟನೆ ಸ್ಥಳದಲ್ಲೇ ಗಾಯಾಳುವಿನ ಪ್ರಾಣಪಕ್ಷಿ ಹಾರಿಹೋಗಿದ್ದು, ಪತಿಯ ಸಾವಿನಿಂದ ಕಂಗಾಲಾದ ಪತ್ನಿ ಶಾಂತಿ ಮುಕ್ಕೋಡ್ಲು ಮನೆಗೆ ಕರೆಮಾಡಿ ವಿಷಯ ತಿಳಿಸಿದ್ದಾಗಿ ಗೊತ್ತಾಗಿದೆ. ಮೃತರ ಸಹೋದರ ಕೆ.ಯು. ಈರಪ್ಪ ಪೊಲೀಸರಿಗೆ ನೀಡಿರುವ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ರಂಜನ್ ಪೂವಯ್ಯ ಸಾಧು ಸ್ವಭಾವ ಹೊಂದಿದ್ದು, ಯಾರೊಬ್ಬರ ತಂಟೆಗೂ ಹೋಗುತ್ತಿರಲಿಲ್ಲವೆಂದು ಪರಿಚಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಯ್ಯ ಅವರ ಪುತ್ರರಾಗಿರುವ ರಂಜನ್ ಪೂವಯ್ಯ ಹಾಗೂ ಇತರರ ನಡುವೆ ಅಸಮಾಧಾನ ಹಿನ್ನೆಲೆ ಕೊಲೆಯಲ್ಲಿ ಪರ್ಯವಸಾನ ಕಂಡಿರುವ ಶಂಕೆ ವ್ಯಕ್ತಗೊಂಡಿದೆ. ಈ ಎಲ್ಲಾ ಹಿನ್ನೆಲೆಯೊಂದಿಗೆ ಪೊಲೀಸರು ಹತ್ಯೆ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಸುಮಾರು 10 ರಿಂದ 15 ಅಡಿಗಳ ಅಂತರದಲ್ಲಿ ರಂಜನ್ ಅವರ ಎದೆಯ ಭಾಗಕ್ಕೆ ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬೀದಿ ದೀಪವನ್ನು ಆರಿಸಿದ ನಂತರ ಹಂತಕರು ಕೃತ್ಯ ನಡೆಸಿದ್ದು, ಘಟನೆಯ ನಂತರ ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರಪೇಟೆ ಡಿವೈಎಸ್‍ಪಿ ಮುರಳೀಧರ್, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಎಂ. ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಡಿಕೇರಿಯಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಸುಳಿವು ಕಲೆ ಹಾಕುವ ಪ್ರಯತ್ನ ನಡೆಸಿದ್ದಾರೆ.

ಅಪರಾಧಿಗಳ ಪತ್ತೆಗಾಗಿ ಪೊಲೀಸ್ ತಂಡಗಳು ಈಗಾಗಲೇ ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವದು. ಎಲ್ಲಾ ಕೋನದಲ್ಲೂ ತನಿಖೆ ನಡೆಸಲಾಗುವದು ಎಂದು ಡಿವೈಎಸ್‍ಪಿ ಮುರಳೀಧರ್ ತಿಳಿಸಿದ್ದಾರೆ. ಹಲವಷ್ಟು ಹಳೆಯ ಪ್ರಕರಣಗಳನ್ನು ಕಳೆದ ಕೆಲ ತಿಂಗಳಿನಲ್ಲಿಯೇ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದೇವೆ. ಈ ಪ್ರಕರಣದ ಆರೋಪಿಗಳನ್ನೂ ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಮುರಳೀಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮಡಿಕೇರಿಯ ಆಸ್ಪತ್ರೆಗೆ ಸಾಗಿಸಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ರಂಜನ್ ಪೂವಯ್ಯ ಅವರು ಪತ್ನಿ ಶಾಂತಿ ಸೇರಿದಂತೆ ಪುತ್ರ ಮಿಥುನ್, ಪುತ್ರಿ ಮೇಘನಾ ಅವರುಗಳನ್ನು ಅಗಲಿದ್ದಾರೆ.