ಶ್ರೀಮಂಗಲ, ಡಿ. 26: ಕೊಡಗು ಜಿಲ್ಲೆಯ ಮೂಲಕ ಅನಪೇಕ್ಷಿತ, ವಿನಾಶಕಾರಿ ರೈಲ್ವೆ ಮಾರ್ಗ ಮತ್ತು ಬಹುಮಾರ್ಗದ ಹೆದ್ದಾರಿ ಯೋಜನೆಗಳಿಂದ ಕಾವೇರಿ ಪವಿತ್ರ ಭೂಮಿ ಮೇಲೆ ಹಾಗೂ ಇಲ್ಲಿನ ಪರಿಸರದ ಮೇಲೆ ದೊಡ್ಡ ಮಟ್ಟದ ದೌರ್ಜನ್ಯ ಉಂಟಾಗುವ ಆತಂಕವಿದೆ. ಇದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗ ಬೇಕೆಂದು ಕೊಡಗು, ಕಾವೇರಿ ಉಳಿಸಿ ಆಂದೋಲನದ ಪ್ರಮುಖ ನಿವೃತ್ತ ಕರ್ನಲ್ ಚೆಪ್ಪುಡಿರ ಪಿ. ಮುತ್ತಣ್ಣ ಒತ್ತಾಯಿಸಿದರು.

ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ಈ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಪಡೆದು ವಿಚಾರ ಪ್ರಸ್ತಾಪಿಸುತ್ತಿದ್ದು, ಕೇರಳದ ಅನುಕೂಲಕ್ಕಾಗಿ ಕೊಡಗಿನ ಮೂಲಕ ರೈಲ್ವೆ ಮಾರ್ಗ, ಬಹುಮಾರ್ಗ ಹೆದ್ದಾರಿ ಯೋಜನೆಗಳಿಂದ ಸಂಚಕಾರ ಉಂಟಾಗುತ್ತದೆ. ಕೇರಳದ ಜನರು ಕೊಡಗಿಗೆ ಮತ್ತಷ್ಟು ವಲಸೆ ಬಂದು ನೆಲೆ ನಿಲ್ಲುವ ಮೂಲಕ ಹಲವು ವರ್ಷಗಳಲ್ಲಿ ಬಾಷಾ ಆಧಾರದಲ್ಲಿ ಕೊಡಗನ್ನು ಕೇರಳದೊಂದಿಗೆ ವಿಲೀನಗೊಳಿಸುವ ಆತಂಕವಿದೆ. ಅಲ್ಲದೇ ಕೊಡಗಿನಲ್ಲಿ ಕೇರಳದ ಪ್ರಭಾವದ ರಾಜಕೀಯ ನಿಯಂತ್ರಿಸುವ ಅಪಾಯವಿದೆಯೆಂದು ಹೇಳಿದರು.

ರೈಲುಮಾರ್ಗ: ಕೊಡಗು ಮೂಲಕ 2 ರೈಲ್ವೆ ಮಾರ್ಗ ಯೋಜನೆಗಳಿವೆ. 2 ಯೋಜನೆಗಳು ಪಿರಿಯಾಪಟ್ಟಣವನ್ನು ಜಂಕ್ಷನ್ ಪಾಯಿಂಟ್ ಎಂದು ಮಾಡಲಾಗಿದೆ. ದ.ಕೊಡಗು ಮೂಲಕ ತಲಚೇರಿಯಿಂದ ಮೈಸೂರುವರೆಗೆ ಮತ್ತು ಹುಣಸೂರು-ಪಿರಿಯಾಪಟ್ಟಣ ಮೂಲಕ ಕುಶಾಲನಗರ- ಮಡಿಕೇರಿ ಮೂಲಕ ಮಂಗಳೂರುವರೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಮೈಸೂರು-ತಲಚೇರಿ ಮಾರ್ಗ: ಈ ಸಾಲಿನ ನಿಖರ ರೈಲ್ವೆ ಜೋಡನೆ ಅಂತಿಮ ಗೊಳಿಸಲಾಗುತ್ತಿದೆ. ಲಭ್ಯವಿರುವ ಮಾಹಿತಿ ಪ್ರಕಾರ ತಲಚೇರಿಯಿಂದ ಮತ್ತು ಕೇರಳದ ವಯನಾಡು ಪ್ರದೇಶದ ಮೂಲಕ ಯೋಜನೆ ಆಗುತ್ತದೆ.

(ಮೊದಲ ಪುಟದಿಂದ) ಕೊಡಗಿನಲ್ಲಿ ಕುಟ್ಟಕ್ಕೆ ಪ್ರವೇಶಿಸಿ ಬಾಳೆಲೆ ನಿಟ್ಟೂರು, ಕಾನೂರು ಪ್ರದೇಶದ ತಿತಿಮತಿ ಮೂಲಕ ಹಾದು ಹೋಗುತ್ತದೆ. ನಾಗರಹೊಳೆ ಮೂಲಕ ಪಂಚವಳ್ಳಿ ಮತ್ತು ಪಿರಿಯಾಪಟ್ಟಣಕ್ಕೆ ಹಾದು ಹೋಗಲಿದೆ. ಅರಣ್ಯ ಪ್ರದೇಶಗಳಲ್ಲಿ ಸುರಂಗದ ಮೂಲಕ ಹೋಗುವದು ಈ ಯೋಜನೆಯ ಕಾರಣದಿಂದಾಗಿ ಇದು ಅರಣ್ಯ ಇಲಾಖೆಯ ಅನುಮತಿಯನ್ನು ನೀಡುತ್ತದೆ. ಕೊಡಗಿನ 12 ಕಿ.ಮೀ ಅರಣ್ಯ ಮತ್ತು ಕೇರಳದ 55 ಕಿ.ಮೀ.ಗಳ ಅರಣ್ಯ ಸುರಂಗ ಮಾರ್ಗ ಮಾಡಿ ಹಾದು ಹೋಗುತ್ತದೆ. ಸುರಂಗ ಮಾರ್ಗವು ವಿಶೇಷ ಉದ್ದೇಶ ವಾಹನ (ಎಸ್.ಪಿ.ವಿ.) ದಿಂದ ನಡೆಯಲಿದೆ.

ಯೋಜನೆಯ ಒಟ್ಟು ವೆಚ್ಚವೂ 6,685 ಕೋಟಿ ರೂ.ಗಳಾಗಿದ್ದು, ರೈಲ್ವೆ ಇಲಾಖೆ ಶೇ. 49ರಷ್ಟು ಬಂಡವಾಳವನ್ನು ಮತ್ತು ಕರ್ನಾಟಕ ಮತ್ತು ಕೇರಳ ಸರಕಾರ ಶೇ. 51ರಷ್ಟು ಬಂಡವಾಳವನ್ನು ಹಾಕಲಿವೆ. ಇದರರ್ಥ ಕರ್ನಾಟಕ ಸುಮಾರು 1800 ಕೋಟಿ ಖರ್ಚು ಮಾಡುತ್ತದೆ. ಈ ಯೋಜನೆಗೆ ದೆಹಲಿ ಮೆಟ್ರೋ ರೈಲ್ವೆಯ ಅಧ್ಯಕ್ಷರಾಗಿ ಇತ್ತೀಚೆಗೆ ನಿವೃತ್ತರಾದ ಶ್ರೀಧರನ್ ವಿನ್ಯಾಸಗೊಳಿಸಿದ್ದಾರೆ. ಕೇರಳದ ನೀಲಂಬೂರಿನಿಂದ ನಂಜನಗೂಡಿಗೆ ಇನ್ನೊಂದು ಮಾರ್ಗವನ್ನು ಸಲಹೆ ನೀಡಿದ್ದರು. ಆದರೆ ನಮ್ಮ ಮಾಹಿತಿಯ ಪ್ರಕಾರ ಕೇರಳದ ಸಿ.ಪಿ.ಎಂ. ಸರ್ಕಾರವೂ ಕೊಡಗು-ಕೇರಳ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿದೆ. ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿಯಲ್ಲಿರುವ ಕೇರಳದ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕದ ಮುಖ್ಯಮಂತ್ರಿಯೊಂದಿಗೆ ಕೆಲವು ತಿಂಗಳ ಹಿಂದೆ ಕೇರಳದ ಇತರ ಅಧಿಕಾರಿಗಳೊಂದಿಗೆ ಅವರ ಸಹಕಾರಕ್ಕಾಗಿ ಮನವಿ ಮಾಡಿದ್ದಾರೆ. ತರುವಾಯ ಕೇರಳದ ಮುಖ್ಯ ಕಾರ್ಯದರ್ಶಿ ಮತ್ತು ಕೇರಳದ ಇತರ ಅಧಿಕಾರಿಗಳು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಕೇರಳ ಸರ್ಕಾರವೂ ಜೋಡನೆ ಮಾಡಿದ ನಂತರ ಪ್ರಸ್ತಾಪಿತ ಸಾಲಿನ ಸಮೀಕ್ಷೆ ನಡೆಸಲು ಒಪ್ಪಂದ ಮಾಡಿಕೊಂಡಿದೆ ಎಂದು ಕರ್ನಲ್ ಮುತ್ತಣ್ಣ ಆತಂಕ ವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ ಈ ರೈಲ್ವೆ ಮಾರ್ಗವನ್ನು ನಾವು ಸಂಪೂರ್ಣವಾಗಿ ವಿರೋಧಿಸಲು ಕಾರಣವೆಂದರೆ ಕೊಡಗಿನಲ್ಲಿ ಲಕ್ಷಗಟ್ಟಲೆ ಮರಗಳು ನಾಶವಾಗುತ್ತದೆ. ಮನೆಗಳು ಮತ್ತು ಕಾಫಿ ತೋಟ ಇತ್ಯಾದಿಗಳು ನಾಶವಾಗಲಿದೆ. ಕೊಡಗಿನಲ್ಲಿ ಮಾನವ ವನ್ಯ ಪ್ರಾಣಿಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ ಎಂಬುದಾಗಿದೆ ಎಂದು ಅವರು ವಿವರಿಸಿದರು.

ಕಾವೇರಿ ನದಿಯೂ ಒಂದು ವರ್ಷದಲ್ಲಿ ನಾಲ್ಕು ತಿಂಗಳ ಕಾಲ ಸಮುದ್ರವನ್ನು ತಲುಪುತ್ತಿಲ್ಲ. ಬರದಿಂದಾಗಿ ಕರ್ನಾಟಕ-ತಮಿಳುನಾಡಿನ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗಿನಲ್ಲಿ ಈಗಾಗಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಮಲಯಾಳಂ ಮಾತನಾಡುವ ಜನರಿದ್ದು, ರೈಲ್ವೆ ಮತ್ತು ಹೈವೆ ಯೋಜನೆಗಳು ರೂಪುಗೊಂಡರೆ ಕೇರಳದ ಜನರ ವಲಸೆ ಪ್ರವಾಹ ರೀತಿಯಲ್ಲಿ ಕೊಡಗಿಗೆ ಬರಲಿದೆ. ಈಗಾಗಲೇ ಮೂಲ ಕೇರಳಿಗರು ಕೊಡಗಿನಲ್ಲಿ ರಾಜಕೀಯವನ್ನು ನಿಯಂತ್ರಿಸುತ್ತಿದ್ದಾರೆ. ಕೆಲವು ವರ್ಷಗಳಲ್ಲಿ ಕೊಡಗನ್ನು ಕೇರಳದೊಂದಿಗೆ ವಿಲೀನಗೊಳಿಸಲು ಬೇಡಿಕೆ ಬರುವದರಲ್ಲಿ ಯಾವದೇ ಸಂದೇಹವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಿಂದ ಪಿರಿಯಾಪಟ್ಟಣ ಮೂಲಕ ಕುಶಾಲನಗರ-ಮಡಿಕೇರಿವರೆಗೆ (ಮಕ್ಕಂದೂರು) ವರೆಗೆ ಇನ್ನೊಂದು ರೈಲ್ವೆ ಮಾರ್ಗವಿದೆ. ಆರ್.ಟಿ.ಐ. ಮೂಲಕ ಈ ಯೋಜನೆ ಅಂತಿಮವಾಗಿ ಮಡಿಕೇರಿ ಮೂಲಕ ಮಂಗಳೂರುವರೆಗೆ ಹೋಗಲಿದೆ. ಉತ್ತರ ಕೊಡಗಿನಲ್ಲಿ ಅಪಾರ ಪ್ರಮಾಣ ಮರ ಹನನ ಉಂಟಾಗಿ ಮಾನವ-ಕಾಡಾನೆ ಸಂಘರ್ಷ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡಗು ಮೂಲಕ ಬಹುಮಾರ್ಗದ ರಾಷ್ಟ್ರೀಯ ಹೆದ್ದಾರಿಗಳು: ಕೊಡಗಿನ ಮೂಲಕ 4 ರಾಷ್ಟ್ರೀಯ ಹೆದ್ದಾರಿಗಳು ಯೋಜಿಸಲಾಗಿದೆ. 1. ಮೈಸೂರು-ಕೊಡ್ಲಿಪೇಟೆ, ಸುಂಟಿಕೊಪ್ಪ-ಮಡಿಕೇರಿ-ಗೋಣಿಕೊಪ್ಪ-ಕುಟ್ಟ-ಮಾನಂದವಾಡಿ. 2. ಈ ಹೆದ್ದಾರಿಯ ಒಂದು ಶಾಖೆ ಮಡಿಕೇರಿಯನ್ನು ಮಂಗಳೂರು ಹೆದ್ದಾರಿಗೆ ಸಂಪರ್ಕಿಸುತ್ತದೆ. 3. ಪಾಣತ್ತೂರ್-ಭಾಗಮಂಡಲ-ಮಡಿಕೇರಿ. 4. ಮಟ್ಟನೂರು-ಗೋಣಿಕೊಪ್ಪ-ತಿತಿಮತಿ-ಹುಣಸೂರು. ಈ ಹೆದ್ದಾರಿಗಳನ್ನು 4 ಲೇನ್ ಹೆದ್ದಾರಿಗಳೆಂದು ಯೋಜಿಸಲಾಗಿದೆ. ಇದು ಕೊಡಗಿನ ಹಸಿರು ಕವಚಕ್ಕೆ ಭಾರಿ ವಿನಾಶವನ್ನು ಉಂಟುಮಾಡುತ್ತದೆ ಮತ್ತು ಮಡಿಕೇರಿ ಸೇರಿದಂತೆ ಸಂಪೂರ್ಣವಾಗಿ ನಗರಗಳು ಮತ್ತು ಪಟ್ಟಣವನ್ನು ನಾಶಮಾಡುತ್ತದೆ. ನಾವು ಕೇಂದ್ರ ಸಾರಿಗೆ ಸಚಿವರ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೇವೆ. ಕೇರಳದಲ್ಲಿ ಬಹುಮಟ್ಟಿಗೆ ಕಡಿಮೆ ಅಗಲದ 7 ಮೀಟರ್ ಹೆದ್ದಾರಿಗಳಿವೆ. ಆದರೆ. ಕೇರಳದ ಹೊರಗಿನ ಪ್ರದೇಶಗಳಿಗೆ ಸಂಪರ್ಕ ಹೊಂದಿದ್ದಾಗ ಅವು 30 ಮೀ. ಅಗಲ ಮತ್ತು 4 ಲೇನ್ ಹೆದ್ದಾರಿಗಳನ್ನು ಬಯಸುವದು ಎಷ್ಟು ಸರಿ? ಕೇರಳ ನಷ್ಟಪಟ್ಟುಕೊಳ್ಳಲು ತಯಾರಿಲ್ಲ. ಆದರೆ ಕೊಡಗನ್ನು ನಷ್ಟಗೊಳಿಸಲು ಮುಂದಾಗಿರುವದು ಸರಿಯಲ್ಲ ಎಂದು ಮುತ್ತಣ್ಣ ಹೇಳಿದರು.

ಕೊಡಗಿನ ಎಲ್ಲಾ ಜನರು ಮತ್ತು ಎಲ್ಲಾ ಪಕ್ಷಗಳು, ಎಲ್ಲಾ ಸಮಾಜಗಳಿಗೆ ಕೊಡಗು ಮತ್ತು ಕಾವೇರಿ ಉಳಿಸುವ ಹೋರಾಟಕ್ಕೆ ಬೆಂಬಲ ವಿಸ್ತರಿಸಲು ಮನವಿ ಮಾಡಿದ್ದೇವೆ. ಕೊಡಗಿನ ಸ್ಥಳೀಯ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ಕ್ರಮಗಳನ್ನು ಸಹ ಉಭಯ ಸರ್ಕಾರಗಳು ಘೋಷಿಸಬೇಕು. ಅಂತಿಮವಾಗಿ ನಮ್ಮ ಪ್ರತಿಭಟನೆಯು ಕೇರಳದ ಜನರ ವಿರುದ್ಧವಾಗಿಲ್ಲ. ಆದರೆ ಕೇರಳ ಸರಕಾರದ ಅನಗತ್ಯ ನೀತಿಗಳಿಗೆ ವಿರುದ್ಧವಾಗಿರುತ್ತದೆ ಎಂದರು.

ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೇಷನ್ ಸಂಘದ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ತಿತಿಮತಿ-ದೇವರಪುರದ ಗ್ರೀನ್ ವ್ಯಾಲಿ ಕಮ್ಯೂನಿಟಿ ಫೋರಂನ ಅಧ್ಯಕ್ಷ ಎಂ.ಟಿ. ಸುಬ್ಬಯ್ಯ, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಕೂರ್ಗ್ ವೆಲ್‍ನೆಸ್ ಸಂಸ್ಥೆಯ ಸ್ಥಾಪಕ ಸದಸ್ಯೆ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ, ಗ್ರೀನ್ ಕೂರ್ಗ್ ಇನಿಶೇಟಿವ್ ಸದಸ್ಯ ಕೊಕ್ಕಂಡ ಪವನ್ ಹಾಗೂ ಪುತ್ತಾಮನೆ ಸ್ಮರಣ್ ಹಾಜರಿದ್ದರು.