ಮಡಿಕೇರಿ, ಡಿ. 24: ಕ್ರೀಡೆಯ ತವರು ಎಂಬ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯ ಹಲವಾರು ಕ್ರೀಡಾಪಟುಗಳು ಕ್ರೀಡೆಯ ಸಾಧನೆಗಾಗಿ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಲ್ಲಿ ಓರ್ವ ಕ್ರೀಡಾ ತಾರೆಯಾಗಿರುವ ಎರಡು ಒಲಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕ್ರೀಡಾಪಟು, ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಇದೀಗ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ.
ಅಮ್ಮತ್ತಿ ಮೂಲದವರಾದ ಮಾಚಿಮಂಡ ಪೊನ್ನಪ್ಪ ಹಾಗೂ ಕಾವೇರಿ ದಂಪತಿಯ ಪುತ್ರಿ ಅಶ್ವಿನಿ ಪೊನ್ನಪ್ಪ ಅವರ ವಿವಾಹ ತಾ. 24 ರಂದು ನೆರವೇರಿತು.
ಈ ಹಿಂದಿನ ಕೊಡವ ಮದುವೆ ಪದ್ಧತಿಯಂತೆ
(ಮೊದಲ ಪುಟದಿಂದ) ವಿವಾಹ ನಡೆದಿರುವದು ವಿಶೇಷ. ಅಶ್ವಿನಿ ಮದುವೆ ಸಮಾರಂಭ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದರೆ, ಈಕೆಯನ್ನು ವಿವಾಹವಾಗಿರುವ ಪೊನ್ನಚೆಟ್ಟಿರ ತಿಮ್ಮಯ್ಯ ಹಾಗೂ ಪೂವಿ ದಂಪತಿಯ ಪುತ್ರ ಮಾಡೆಲ್ ಕರಣ್ ಮೇದಪ್ಪ ಅವರ ಶುಭಕಾರ್ಯ ವೀರಾಜಪೇಟೆಯ ಸೆರಿನಿಟಿ ಹಾಲ್‍ನಲ್ಲಿ ನಿಗದಿಯಾಗಿತ್ತು. ಸಂಜೆ ಮದುವೆ ಹುಡುಗ ದಿಬ್ಬಣದೊಂದಿಗೆ ಅಮ್ಮತ್ತಿ ಕೊಡವ ಸಮಾಜಕ್ಕೆ ತೆರಳಿ ಅಲ್ಲಿ ದಂಪತಿ ಮುಹೂರ್ತ, ಇದಾದ ಬಳಿಕ ಗಂಗಾಪೂಜೆ (ನೀರೆಡುಪೊ) ಶಾಸ್ತ್ರ ವೀರಾಜಪೇಟೆಯಲ್ಲಿ ನೆರವೇರಿತು.
ಅಶ್ವಿನಿ ವಿವಾಹ ಸಮಾರಂಭದಲ್ಲಿ ಭಾರತವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಕೊಡಗಿನ ಕ್ರೀಡಾತಾರೆಗಳಾದ ಅರ್ಜುನ ಪ್ರಶಸ್ತಿ ವಿಜೇತರು ಹಾಗೂ ಒಲಂಪಿಯನ್‍ಗಳಾದ ಹಾಕಿಪಟು ಡಾ. ಅಂಜಪರವಂಡ ಬಿ. ಸುಬ್ಬಯ್ಯ, ಟೆನ್ನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ, ಸ್ಕ್ವಾಷ್ ತಾರೆ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ ಸೇರಿದಂತೆ ಹಲವಾರು ಕ್ರೀಡಾಪಟುಗಳು, ಗಣ್ಯರು ಪಾಲ್ಗೊಂಡು ಶುಭ ಕೋರಿದರು. ಅಶ್ವಿನಿಯ ಜತೆಗಾರ್ತಿ ಜ್ವಾಲಗುಟ್ಟಾ ಹಾಗೂ ಇತರ ಹಲವು ಕ್ರೀಡಾಪಟುಗಳು, ವಿವಿಧ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಸ್ನೇಹಿತೆಯ ಮದುವೆಗೆ ಹಾಜರಾಗಿರಲಿಲ್ಲ.
-ಶಶಿ