ನಾಪೆÇೀಕ್ಲು, ಡಿ. 27: ಕೊಡಗಿನಲ್ಲಿ ಎಲ್ಲಿ ನೋಡಿದರೂ ಬೆಳೆದು ನಿಂತ ಭತ್ತದ ಗದ್ದೆಗಳು. ಬೀಸುವ ತಂಗಾಳಿಗೆ ತಲೆತೂಗಿಸುತ್ತಾ ಕಟಾವಿಗೆ ಸಿದ್ಧವಾಗಿರುವ ಭತ್ತದ ಬೆಳೆ. ಅಲ್ಲಲ್ಲಿ ಭತ್ತದ ಕುಯ್ಲಿಗೆ ಅಣಿಯಾಗುತ್ತಿರುವ ಜನ ಕೆಲವೆಡೆ ಭತ್ತದ ಕಟಾವು. ಸಾಲುಸಾಲಾಗಿ ಭತ್ತದ ಬೆಳೆಯ ಹೊರೆ ಹೊತ್ತು ಸಾಗುವ ಮನೆ ಮಂದಿ ಇವುಗಳೆಲ್ಲ ಭೂತಕಾಲದ ನೆನಪುಗಳಷ್ಟೇ.ಆದರೆ ಈಗ ಇವುಗಳಿಗೆ ತದ್ವಿರುದ್ಧ; ಎಲ್ಲಿ ನೋಡಿದರೂ ಪಾಳು ಬಿದ್ದಿರುವ ಗದ್ದೆ ಸಾಲುಗಳು ನಡುವೆ ತೇಪೆ ಹಾಕಿದಂತೆ ಅಲ್ಲೊಂದು ಇಲ್ಲೊಂದು ಕೃಷಿ ಮಾಡಿದ ಗದ್ದೆಗಳು ಕಾಣಲಿವೆ.

ಭತ್ತದ ಕಟಾವು ಸಂದರ್ಭದಲ್ಲಿ ಹೆಚ್ಚಿನ ಕೃಷಿಕರಲ್ಲಿ ಆತಂಕದ ಛಾಯೆಯನ್ನು ಕಾಣಬಹುದು. ಅಕಾಲಿಕ ಮಳೆ ಹಾಗೂ ಕೂಲಿ ಕಾರ್ಮಿಕರ ಕೊರತೆ ಇದಕ್ಕೆ ಮೂಲ ಕಾರಣ. ಕಟಾವು ಮಾಡಿದ ಬೆಳೆಯನ್ನು ಕಣಕ್ಕೆ ಸಾಗಿಸಿ ಹುಲ್ಲಿನಿಂದ ಭತ್ತವನ್ನು ಬೇರ್ಪಡಿಸಿ ಶೇಖರಿಸಿಡುವವರೆಗೆ ಅವರಲ್ಲಿ ಹೆಚ್ಚಿನ ಒತ್ತಡ ಕಂಡು ಬರುತ್ತದೆ. ಭತ್ತದ ಸಸಿ ನಾಟಿ ಸಂದರ್ಭಗಳಲ್ಲಿ ಇಂತಹ ಒತ್ತಡಗಳು ಕಡಿಮೆ.

ಭತ್ತದ ಕಟಾವು ಮಾಡಿ ಒಣಹಾಕಿದ ಸಮಯದಲ್ಲಿ ಮಳೆ ಬಂದು ಗದ್ದೆಗಳಲ್ಲಿ ನೀರು ಸಂಗ್ರಹವಾದರೆ ಭತ್ತ ಮೊಳಕೆಯೊಡೆಯುವದು, ನೀರಿನಲ್ಲಿ ಭತ್ತ ತನ್ನ ಮೂಲ ಸ್ವರೂಪ ಕಳೆದುಕೊಂಡು ಕಪ್ಪಾಗುವದಲ್ಲದೆ ಅಕ್ಕಿಯು ಕಹಿಯನ್ನು ಹೊಂದುತ್ತದೆ. ಇದರಿಂದ ಆರು ತಿಂಗಳಿನಿಂದ ತಾವು ನಡೆಸಿದ ಕಠಿಣ ಶ್ರಮ ವ್ಯರ್ಥವಾಗುವದು ಎಂಬ ಭೀತಿ ಕೃಷಿಕರದ್ದು.

ಆದರೆ ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆಯನ್ನು ಹೊರತುಪಡಿಸಿದರೆ ಯಂತ್ರೋಪಕರಣಗಳ ಸಹಾಯದಿಂದ ಶೀಘ್ರವಾಗಿ ಭತ್ತದ ಕೃಷಿಯ ಕೆಲಸಗಳನ್ನು ಮುಗಿಸಬಹುದು. ಇದರಿಂದ ಕೂಲಿ ಆಳುಗಳ ಸಮಸ್ಯೆ ಏನೋ ಪರಿಹಾರವಾದಂತಾಗುವದು; ಆದರೆ ಯಂತ್ರೋಪಕರಣಗಳ ಬಾಡಿಗೆ ಇನ್ನಿತರ ಖರ್ಚು ಸೇರಿಸುವಾಗ ಬೆಳೆದ ಭತ್ತ ಮಾರಿದರೂ ಕೃಷಿಗೆ ಮಾಡಿದ ವೆಚ್ಚ ಸರಿದೂಗುವದಿಲ್ಲ ಎಂಬ ಮಾತುಗಳು ಕೃಷಿಕರಿಂದ ಕೇಳಿಬರುತ್ತಿದೆ.

ಭತ್ತದ ಕೃಷಿಯ ಖರ್ಚು ವೆಚ್ಚಗಳ ಬಗ್ಗೆ ಹೇಳುವದಾದರೆ ಕೃಷಿಕ ಕುಟುಂಬಗಳ ಸದಸ್ಯರು ಕೃಷಿಯಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳದೆ ಕೂಲಿ ಕಾರ್ಮಿಕರನ್ನೇ ಅವಲಂಬಿಸಿರುವದು ಇದಕ್ಕೆ ಕಾರಣ ಎನ್ನುತ್ತಾರೆ ಅನುಭವಿ ಕೃಷಿಕರು, ಹಿಂದೆ ಕೊಡಗಿನಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಎಲ್ಲರೂ ಭತ್ತದ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರೆ. ಸ್ವಂತಕ್ಕೆ, ಗುತ್ತಿಗೆಗೆ, ವಾರಕ್ಕೆ ಹೀಗೆ ನಾ ಮುಂದು ತಾ ಮುಂದು ಎಂದು ಕೃಷಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಭತ್ತದ ಬೇಸಾಯದಲ್ಲಿ ಅವರಿಗಿದ್ದ ಉತ್ಸಾಹ, ಆತುರ ಈಗಿನ ಜನರಲ್ಲಿ ಮಾಯವಾಗಿದೆ. ಆಗಿನ ಬೇಸಾಯವು ಪೂರ್ತಿಯಾಗಿ ಸಾವಯವದಿಂದ ಕೂಡಿತ್ತು. ಎಲ್ಲ ಕೃಷಿಕರಲ್ಲೂ ದನಕರುಗಳು ಸಮೃದ್ಧಿಯಾಗಿರುತ್ತಿದ್ದವು. ಆಗ ದನಗಳ ಗೊಬ್ಬರವನ್ನು ಭತ್ತದ ಕೃಷಿಗೆ ಮಾತ್ರ ಉಪಯೋಗಿಸಲಾಗುತ್ತಿತ್ತು. ಇದರಿಂದ ಉತ್ತಮ ಬೆಳೆ, ಇಳುವರಿಯಿಂದ ನಷ್ಟ ಉಂಟಾಗುತ್ತಿರಲಿಲ್ಲ. ಎಲ್ಲಾ ಕಡೆಗಳಲ್ಲಿಯೂ ಭತ್ತದ ಬೆಳೆ ಬೆಳೆಯುತ್ತಿದ್ದುದರಿಂದ ಕಾಡು ಪ್ರಾಣಿಗಳ, ಪಕ್ಷಿಗಳ ಉಪಟಳ ಎಲ್ಲಾ ಭಾಗಗಳಿಗೂ ಹಂಚಿಹೋಗುತ್ತಿತ್ತು. ಇದರಿಂದ ಹೆಚ್ಚಿನ ನಷ್ಟ ಉಂಟಾಗುತ್ತಿರಲಿಲ.್ಲ ಆದರೆ ಈಗ ಭತ್ತದ ಕೃಷಿ ಕಡಿಮೆಯಿರುವದರಿಂದ ಎಲ್ಲಾ ಪ್ರಾಣಿ ಪಕ್ಷಿಗಳು ಒಂದೇ ಕಡೆಗೆ ಧಾಳಿಯಿಟ್ಟು ಹೆಚ್ಚಿನ ಹಾನಿ ಕಂಡುಬರುತ್ತದೆ ಎನ್ನುತ್ತಾರೆ ಹಿರಿಯ ಕೃಷಿಕ ಬೊಪ್ಪಂಡ ಕಾಶಿ ನಂಜಪ್ಪ.

ಈಗ ಕೊಡಗಿನಲ್ಲಿ ಕಾಫಿ ಬೇಸಾಯಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಗೊಬ್ಬರ, ಕೆಲಸ ಕಾರ್ಯಗಳೆಲ್ಲದರಲ್ಲೂ ಕಾಫಿ ತೋಟಕ್ಕೆ ಮೊದಲ ಆದ್ಯತೆ. ಇದರಿಂದಾಗಿ ಭತ್ತದ ಬೆಳೆಗೆ ಬರೀ ರಾಸಾಯನಿಕ ಗೊಬ್ಬರ ಮಾತ್ರ ಉಪಯೋಗಿಸುವ ಸ್ಥಿತಿ ಒದಗಿದೆ. ಪರಿಣಾಮ ಭತ್ತದ ಬೇಸಾಯದಲ್ಲಿ ಲಾಭ ಕಡಿಮೆ ಎಂಬ ಕೂಗು. ಕೊಡಗಿನಲ್ಲಿ ಬೆಳೆದ ಭತ್ತದ ಅಕ್ಕಿಯ ರುಚಿಗೂ ಹೊರ ಜಿಲ್ಲೆಯಿಂದ ಖರೀದಿಸಿದ ಅಕ್ಕಿಯ ರುಚಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ ಎಂಬದು ಅನುಭವಸ್ಥರ ಮಾತು.

ಇತ್ತೀಚಿನ ಭತ್ತದ ಕೃಷಿಯ ಕುಂಠಿತಕ್ಕೆ ಯುವ ಜನರ ನಗರಾಕರ್ಷಣೆಯು ಒಂದು ಕಾರಣ ಎನ್ನಬಹುದು. ಸ್ವಂತ ಕೃಷಿ ಭೂಮಿ ಜಮೀನುಗಳಲ್ಲಿ ಉತ್ತಮ ಪರಿಸರದಲ್ಲಿ ನೆಮ್ಮದಿಯ ಜೀವನವನ್ನು ಬಿಟ್ಟು ನಗರಗಳಲ್ಲಿ ಕಷ್ಟಪಡುವ ಕೆಲವು ಜನ ಇದರ ಬಗ್ಗೆ ಮನಸ್ಸು ಮಾಡಿದರೆ ಭತ್ತದ ಕೃಷಿ ಕೊಡಗಿನಲ್ಲಿ ಪುನಶ್ಚೇತನಗೊಳ್ಳಲು ಸಾಧ್ಯ ಎಂಬ ಕಹಿ ಸತ್ಯ ಕೊಡಗಿನ ಜನರಿಗೆ ಮನವರಿಕೆಯಾಗಬೇಕಾಗಿದೆ. ಸರಕಾರವು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಕೈಗಾರಿಕೆಗಳಿಗೆ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಪರವಾನಿಗೆ ನೀಡುತ್ತಿರುವದು ಕೃಷಿಯ ಮೇಲಿನ ನಿರುತ್ಸಾಹಕ್ಕೆ ಮೂಲ ಕಾರಣವಾಗಿದೆ ಎನ್ನಬಹುದು.

ನಮ್ಮನ್ನು ಆಳುವ ಸರಕಾರಗಳು ಭತ್ತದ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಆದರೆ ಈ ಬೆಂಬಲ ಬೆಲೆಯಿಂದ ಕೊಡಗಿನಲ್ಲಿ ಭತ್ತ ಬೆಳೆಯುವ ಕೃಷಿಕನಿಗೆ ಲಾಭವಾಗಲಿದೆಯೇ ಎಂಬ ಬಗ್ಗೆ ಚಿಂತನೆ ನಡೆಸುವದು ಅಗತ್ಯವಾಗಿದೆ.

ಸರಕಾರವು ರಾಜ್ಯಾದ್ಯಂತ ಒಂದೇ ಬೆಂಬಲ ಬೆಲೆ ನಿಗದಿಪಡಿಸಿದೆ. ಬಯಲು ಸೀಮೆಯಲ್ಲಿ ಭತ್ತದ ಬೆಳೆಯ ಇಳುವರಿ ಪ್ರಮಾಣ ಶೇ.100 ರಷ್ಟು ಲಭಿಸಿದರೆ, ಕೊಡಗಿನ ಕೃಷಿಕರಿಗೆ ಈ ಇಳುವರಿಯ ಪ್ರಮಾಣ ಶೇ.60 ಮಾತ್ರ ಎಂಬ ಅಂಶವನ್ನು ಗಮನಿಸಬೇಕಾಗಿದೆ. ಬಯಲು ಸೀಮೆಯ ಮಳೆಯೂ ಇಳಿಮುಖ...

ಕೊಡಗಿನಲ್ಲಿ ಕಾಡು, ನಾಡಿನಲ್ಲಿ ಬೆಳೆ, ಗೋಸಂಪತ್ತು ಸಮೃದ್ಧಿಯಾಗಿದ್ದಾಗ ಸರಿ ಸುಮಾರು 300 ಇಂಚು ಮಳೆಯೊಂದಿಗೆ ಭೂಮಿ ಫಲವತ್ತಾಗಿತ್ತು. ಇಂದು ಈ ಮಳೆಯ ಪ್ರಮಾಣ ಸರಾಸರಿ 100 ಇಂಚು ಕೂಡ ಇಲ್ಲ.

2015ರಲ್ಲಿ ಸರಾಸರಿ 91.36 ಇಂಚು, 2016ರಲ್ಲಿ 71.24 ಇಂಚು, 2017 ಡಿಸೆಂಬರ್ ಅಂತ್ಯಕ್ಕೆ ಪ್ರಸಕ್ತ 87.79 ಇಂಚು ಮಾತ್ರ ಮಳೆ ದಾಖಲಾಗಿದೆ. ಇನ್ನು 37 ಸಾವಿರಕ್ಕೂ ಅಧಿಕವಿದ್ದ ಭತ್ತದ ಗದ್ದೆ 30,500 ಹೆಕ್ಟೇರ್ ತಲಪಿದೆ. ಈ ಸಾಲಿನಲ್ಲಿ ಈ ಗುರಿ ಕೂಡ ತಲಪದೆ ಕೇವಲ 26,897 ಹೆಕ್ಟೇರ್ ಕೃಷಿ ಮಾಡಲಾಗಿದೆ. ಅಂತೆಯೇ ಭತ್ತದ ಗುರಿ ಈ ಸಾಲಿನಲ್ಲಿ 1,26,914.200 ಟನ್ ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ರೈತ ನೀಡುವ ‘ಅನ್ನ ಬಟ್ಟಲು’ ಕಾವೇರಿ ನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಕಿರಿದಾಗಿ ಭತ್ತದ ಸಿರಿ ಕೂಡ ಕಡಿಮೆ ಆಗುತ್ತಿರುವದು ಆತಂಕಕಾರಿ ಬೆಳವಣಿಗೆಯೇ ಸರಿ.