ಸೋಮವಾರಪೇಟೆ, ಸೆ. 27: ವಿದ್ಯುತ್ ಪ್ರವಹಕಗಳು, ಮೊಬೈಲ್ ಟವರ್‍ಗಳ ನಿರ್ಮಾಣ ದಿಂದ ಬಹು ತೇಕ ಕಣ್ಮರೆಯಾ ಗುತ್ತಿರುವ ಅನೇಕ ಪಕ್ಷಿ ಪ್ರಭೇದಗಳ ಸಾಲಿನಲ್ಲಿ ಗುಬ್ಬಚ್ಚಿಗಳು ಮೊದಲ ಸ್ಥಾನ ಪಡೆದುಕೊಂಡಿವೆ ಎಂದರೆ ತಪ್ಪಾಗಲಾರದು. ಕೆಲ ವರ್ಷಗಳ ಹಿಂದೆ ಮನೆ, ಅಂಗಡಿಗಳ ಸುತ್ತಮುತ್ತಲೆಲ್ಲಾ ಚೀಂ ಚೀಂ ಎಂದು ಹಾರಾಡುತ್ತಾ ಮಾನವ ಸ್ನೇಹಿಯಾಗಿದ್ದ ಗುಬ್ಬಚ್ಚಿಗಳು ಇತ್ತೀಚಿನ ದಿನಗಳಲ್ಲಿ ಕಾಣಬರುವದೇ ಕಡಿಮೆ.
ಆದರೆ ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 15 ರಿಂದ 20 ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಹಾರಾಡುತ್ತಾ, ಬೆಚ್ಚನೆಯ ಗೂಡಿನೊಳಗೆ ದಿನದೂಡುತ್ತಿವೆ.
ಬಸ್ ನಿಲ್ದಾಣದಲ್ಲಿರುವ ಶ್ರೀ ರಾಘವೇಂದ್ರ ಕ್ಯಾಂಟೀನ್‍ನ ಮಾಲೀಕರಾದ ಯೋಗೇಶ್ ಮತ್ತು ರವಿ ಸಹೋದರರು ಈ ಗುಬ್ಬಚ್ಚಿಗಳಿಗೆಂದೇ ಗೂಡೊಂದನ್ನು ನಿರ್ಮಿಸಿದ್ದಾರೆ.
ಸುಮಾರು 400 ರೂಪಾಯಿ ವ್ಯಯಿಸಿ ಪ್ಲೈವುಡ್ ಶೀಟ್‍ನಲ್ಲಿ ಪುಟ್ಟ ಗೂಡು ಮಾಡಿದ್ದು, 6 ಬಾಗಿಲುಗಳನ್ನು ನಿರ್ಮಿಸಲಾಗಿದೆ. ಒಳಗೆ ಹುಲ್ಲು ಹಾಕಿ ಬೆಚ್ಚಗಿನ ವಾತಾವರಣ ಸೃಷ್ಟಿಸಿದ್ದಾರೆ. ತಮ್ಮ ಕ್ಯಾಂಟೀನ್‍ನಲ್ಲಿರುವ ಒಂದಿಷ್ಟು ತಿಂಡಿಗಳನ್ನು ಆಗಾಗ್ಗೆ ಗುಬ್ಬಚ್ಚಿಗಳಿಗೆ ಹಾಕುತ್ತಾರೆ. ಕೆಲವೊಮ್ಮೆ ಅತ್ತ ಇತ್ತ ಹಾರಾಡಿ ನಂತರ ಈ ಗೂಡಿನೊಳಗೆ ಸೇರಿಕೊಳ್ಳುವ ಗುಬ್ಬಚ್ಚಿಗಳು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.
ಗುಬ್ಬಚ್ಚಿಗಳಿಗೂ ಒಂದು ಗೂಡು ನಿರ್ಮಿಸಿರುವ, ಪತ್ರಿಕಾ ವಿತರಕರೂ ಆಗಿರುವ ಯೋಗೇಶ್ ಮತ್ತು ರವಿ ಸಹೋದರರ ಕಾರ್ಯ ಶ್ಲಾಘನೀಯ ಎಂದು ಪಕ್ಷಿಪ್ರೇಮಿ ಹಾಗೂ ಸಾಹಿತಿಯಾದ ನ.ಲ. ವಿಜಯ ಅವರು ಅಭಿಪ್ರಾಯಿಸಿದ್ದಾರೆ.