ಗೋಣಿಕೊಪ್ಪ ವರದಿ, ಡಿ. 27: ಅಮ್ಮತ್ತಿ-ಬೆಟ್ಟಗೇರಿಯಲ್ಲಿ ಕನ್ನಡ ಮಠದ ವಶಕ್ಕೆ ಬಂದಿರುವ ಕನ್ನಡ ಮಠದ ಜಾಗ ಕನ್ನಡದ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಪೊಲೀಸ್ ಮಹಾ ನಿರ್ದೇಶಕ (ನಿ) ಶಂಕರ ಬಿದರಿ ಅಭಿಪ್ರಾಯಪಟ್ಟರು. ಕನ್ನಡ ಮಠಕ್ಕೆ ಬೇಟಿ ನೀಡಿ ಮಠಾಧಿಪತಿ ಚೆನ್ನಬಸವದೇಶಿಕೇಂದ್ರ ಅವರಿಂದ ಆಶೀರ್ವಾದ ಪಡೆದು ಮಾತನಾಡಿದರು.

ಮಠವನ್ನು ಕನ್ನಡ ಮತ್ತು ಕೊಡವ ಭಾಷೆ ಹಾಗೂ ಸಂಸ್ಕøತಿಯ ಅಭಿವೃದ್ಧಿಗೆ ಶ್ರಮಿಸುವಂತಹ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಹಾಗೂ ಕೊಡಗಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಆಸ್ತಿಯನ್ನು ಬಳಸಿಕೊಳ್ಳಬೇಕೆಂದು ಸ್ವಾಮೀಜಿಯವರು ಆಸಕ್ತಿ ತೋರಿರುವದು ಸ್ವಾಗತಾರ್ಹ. ಹಾಗಾಗಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹಾಲೇರಿ ವಂಶದ ವೀರರಾಜೇಂದ್ರ ಒಡೆಯರು ಸುಮಾರು 197 ಎಕರೆ ಭೂಮಿಯನ್ನು ಕನ್ನಡ ಮಠಕ್ಕೆ ದತ್ತಿಯಾಗಿ ಕೊಟ್ಟಿದ್ದಾರೆ. ಕಾರಣಾಂತರದಿಂದ 30 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದ ಕಾರಣ ಆಸ್ತಿಯು ಮಠದ ಸುಪರ್ದಿಗೆ ಬಂದಿರಲಿಲ್ಲ. ಆದರೆ, ಸ್ವಾಮೀಜಿ ಅವರ ನಿರಂತರ ಪ್ರಯತ್ನದಿಂದಾಗಿ ಮಹಾರಾಜರು ನೀಡಿದ ಉದ್ದೇಶಕ್ಕಾಗಿ ಉಪಯೋಗವಾಗುವ ರೀತಿಯಲ್ಲಿ ಬಳಸಿಕೊಳ್ಳುವದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು.