ಮೂರ್ನಾಡು, ಡಿ. 26: ಮಾನಸಿಕವಾಗಿ ಅಸ್ವಸ್ಥಗೊಂಡ ನಿರಾಶ್ರಿತ ವ್ಯಕ್ತಿಯನ್ನು ಐದು ಮಂದಿ ಯುವಕರು ಸಾರ್ವಜನಿಕರ ಸಹಕಾರದೊಂದಿಗೆ ತಲಚೇರಿಯಲ್ಲಿರುವ ತಣ್ಣಲ್ ಆಶ್ರಮಕ್ಕೆ ಸೇರಿಸಿದ್ದಾರೆ.ಕಳೆದ ಎಂಟು ತಿಂಗಳಿನಿಂದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಪಟ್ಟಣದಲ್ಲಿ ಕಾಲ ಕಳೆಯುತ್ತಿದ್ದ. ಈತ ಊರು, ಹೆಸರು ಹೇಳದೆ ಊಟ ಮಾಡಲು ಕೂಡ ಅರಿವಿಲ್ಲದೆ ಪಟ್ಟಣದಲ್ಲಿ ದಿನನಿತ್ಯ ಅಲೆದಾಡುತ್ತಿದ್ದ ಆ ವ್ಯಕ್ತಿಯನ್ನು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಯುವಕರಾದ ಎಂ.ಸಿ. ಮಹೇಶ್, ಎಸ್. ರಮೇಶ್, ಟಿ.ಸಿ. ಹರೀಶ್, ಎಂ.ಸಿ. ಯೋಗೇಶ್ ಹಾಗೂ ಎಂ.ಬಿ. ಅರುಣ ಅವರುಗಳು ಕೇರಳದ ತಲಚೇರಿ ಜಿಲ್ಲೆಯ ಯಡಚೇರಿ ಎಂಬಲ್ಲಿರುವ ತಣ್ಣಲ್ ಆಶ್ರಮಕ್ಕೆ ಸೇರಿಸಿದ್ದಾರೆ.

ಭಾರತ್ ಪೆಟ್ರೋಲ್ ಬಂಕ್‍ನಲ್ಲಿ ತಲೆ ಕೂದಲು ಕತ್ತರಿಸಿ, ಸಾನ್ನ ಮಾಡಿಸಿ ಹೊಸ ಬಟ್ಟೆ ತೊಡಿಸಿ ವ್ಯಕ್ತಿಯನ್ನು ಕೇರಳಕ್ಕೆ ಕರೆದೊಯ್ದು ಆಶ್ರಮಕ್ಕೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿ ಎರಡು ತಿಂಗಳಿನಲ್ಲಿ ಈತನನ್ನು ಗುಣಪಡಿಸುವ ಭರವಸೆಯನ್ನು ಆಶ್ರಮದ ನಿರ್ವಾಹಕರು ನೀಡಿದ್ದಾರೆ.