ಸೋಮವಾರಪೇಟೆ, ಡಿ. 26: ಟೈಲರ್ ವೃತ್ತಿ ಮಾಡುತ್ತಿರುವ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಗಳನ್ನು ಕಲ್ಪಿಸಲು ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯು ರಾಜ್ಯ ಸಂಘದೊಂದಿಗೆ ಕೈಜೋಡಿಸಲಿದೆ ಎಂದು ಟೈಲರ್ಸ್ ಅಸೋಸಿಯೇಷನ್‍ನ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಮಂಜುನಾಥ್ ಹೇಳಿದರು.

ಸೋಮವಾರಪೇಟೆ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೇ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಟೈಲರ್‍ಗಳು ಸಂಘದಲ್ಲಿ ನೋಂದಾಯಿಸಿ ಕೊಂಡಿದ್ದು, ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಲಾಗಿದೆ. ವೃತ್ತಿ ಬಾಂಧವ ರೆಲ್ಲರೂ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಇತರ ಕಾರ್ಮಿಕರಂತೆ ಸೌಲಭ್ಯಗಳನ್ನು ಹೊಂದಲು ಮುಂದಾಗಬೇಕು ಎಂದು ಕರೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷೆ ಕೆ.ಎಸ್. ಮಮತ ಮಾತನಾಡಿ, ಅಸೋಸಿ ಯೇಷನ್ ವತಿಯಿಂದ ಸದಸ್ಯತ್ವ ನವೀಕರಣ ಅಭಿಯಾನ ನಡೆಸಲಾಗುವದು. ಮುಂದಿನ ದಿನಗಳಲ್ಲಿ ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣೆ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು. ಸಂಘದ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ನಂದೀಶ್, ಮೂರ್ನಾಡು ವಲಯ ಸಮಿತಿ ಅಧ್ಯಕ್ಷ ಎ. ಸಜೀವ, ಕೊಡ್ಲಿಪೇಟೆ ಸಮಿತಿ ಅಧ್ಯಕ್ಷ ಕಾವೇರಪ್ಪ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಶಂಕರ್ ಅವರುಗಳು ಉಪಸ್ಥಿತರಿದ್ದರು.