ಮೂರ್ನಾಡು, ಡಿ. 27: ಬಲಮುರಿ ರಸ್ತೆಯಲ್ಲಿ ಕೋಡಂಬೂರು ಬಳಿ ಕೊಳಚೆ ನೀರು ಸಂಗ್ರಹಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ನಿವಾಸಿಗಳು ಸಲ್ಲಿಸಿದ ಮನವಿಗೆ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ತಕ್ಷಣ ಸ್ಪಂದನೆ ನೀಡಿ ತೊಂದರೆಯನ್ನು ನೀಗಿಸಿದೆ.
ಕೋಡಂಬೂರು ಗ್ರಾಮದಲ್ಲಿ ನಾಯ್ಡು ಅವರ ಮನೆಯ ಬಳಿ ಇರುವ ಬಾಡಿಗೆ ಮನೆಗಳಿಂದ ಪ್ರತಿನಿತ್ಯ ಹೊರಬರುತ್ತಿರುವ ಕಲ್ಮಶ ನೀರು ರಸ್ತೆ ಬದಿಯಲ್ಲಿ ಸಂಗ್ರಹಗೊಳ್ಳುತ್ತಿತ್ತು. ಇದರಿಂದ ಪ್ರತಿನಿತ್ಯ ಶಾಲಾ ಮಕ್ಕಳು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಐದು ಮಂದಿ ಯುವಕರು ನಿವಾಸಿಗಳ ಬವಣೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಿವಾಸಿಗಳ ಸಹಿ ಸಂಗ್ರಹಿಸಿ ಗ್ರಾಮ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣು ಗೋಪಾಲ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತಕ್ಷಣ ಇತ್ತ ಕಡೆ ಗಮನ ಹರಿಸಿ ಜೆಸಿಬಿ ಮೂಲಕ ರಸ್ತೆ ಬದಿಯಲ್ಲಿ ಸಂಗ್ರಹಗೊಳ್ಳುತ್ತಿದ್ದ ಕೊಳಚೆ ನೀರು ಹಾಗೂ ಕಾಡು ಗಿಡಗಳನ್ನು ಸ್ವಚ್ಛಗೊಳಿಸಿ ಚರಂಡಿ ಕಲ್ಪಿಸಿ ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ಪರಿಹರಿಸಿದರು.