ಸೋಮವಾರಪೇಟೆ, ಡಿ. 27: ಸ್ತೀ ಶಕ್ತಿ ಗುಂಪಿನ ಮಹಿಳೆಯರು ಆರ್ಥಿಕ ಸಬಲೀಕರಣದ ಉದ್ದೇಶದಿಂದ ಆದಾಯೋತ್ಪನ್ನ ಚಟುವಟಿಕೆಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೈಲಾ ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ವತಿಯಿಂದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ತಾಲೂಕು ಮಟ್ಟದ ಆದಾಯೋತ್ಪನ್ನ ಚಟುವಟಿಕೆಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಂಪು ಚಟುವಟಿಕೆಗಳನ್ನು ನಡೆಸದೇ ಇರುವ ಸ್ತ್ರೀ ಶಕ್ತಿ ಸಂಘಗಳು ಆದಾಯ ತರುವಂತಹ ಉಪ ಉತ್ಪನ್ನಗಳಾದ ಉಪ್ಪಿನ ಕಾಯಿ, ಅಗರಬತ್ತಿ, ಜೆಲ್ಲಿ, ಬುಟ್ಟಿ ನೇಯ್ಗೆ, ಬ್ಯಾಗ್ ತಯಾರಿಕೆಯಂತಹ ಚಟುವಟಿಕೆಯಲ್ಲಿ ತೊಡಗುವದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು. ಬ್ಯಾಂಕ್‍ಗಳು ಸಹ ಇಂತಹ ಉದ್ಯಮಕ್ಕೆ ಸಾಲ ನೀಡುತ್ತಿವೆ. ಎಲ್ಲ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯ ನಿರ್ದೇಶಕಿ ರೆಹನಾ ಮಾತನಾಡಿ, ಮಹಿಳೆಯರು ಸ್ವಉದ್ಯೋಗದಲ್ಲಿ ತೊಡಗುವದರಿಂದ ಕುಟುಂಬಕ್ಕೂ ಆರ್ಥಿಕ ಲಾಭವಾಗುವದು. ಹೆಚ್ಚಿನ ಶಿಕ್ಷಣ ಇಲ್ಲದಿದ್ದರೂ, ಸತತ ಪ್ರಯತ್ನ, ಆತ್ಮ ವಿಶ್ವಾಸದಿಂದ ಸ್ವಂತ ಉದ್ಯಮದಲ್ಲಿ ತೊಡಗಿದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಸ್ತ್ರೀ ಶಕ್ತಿ ಒಕ್ಕೂಟದ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಮೇರಿ ಅಂಬುದಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಬ್ಲಾಕ್ ಸೊಸೈಟಿಯ ಉಪಾಧ್ಯಕ್ಷೆ ಎನ್.ಕೆ. ಸುಮತಿ ಉಪಸ್ಥಿತರಿದ್ದರು.