ನಾಪೋಕ್ಲು, ಡಿ. 27: ನಮ್ಮ ಪೂರ್ವಿಕರ ದೂರದೃಷ್ಟಿ ಮತ್ತು ಚಿಂತನೆಯಿಂದ ವಿದ್ಯಾಕೇಂದ್ರಗಳು ಜನ್ಮತಳೆದಿದ್ದು ಇದರ ಶ್ರೇಯೋಭಿವೃದ್ಧಿ ಯೊಂದಿಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಚೆಯ್ಯಂ ಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಈಗಿನ ವಿಜ್ಞಾನ ಯುಗದಲ್ಲಿ ಕನ್ನಡದ ಜೊತೆ ಇಂಗ್ಲೀಷ್ ಶಿಕ್ಷಣ ಅನಿವಾರ್ಯ ಆಗಿದ್ದು ಈ ನಿಟ್ಟಿನಲ್ಲಿ ಅನುದಾನಿತ ಹಾಗೂ ಖಾಸಗಿ ಶಾಲೆಗಳು ದಾನಿಗಳ ಸಹಕಾರದೊಂದಿಗೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ದಾನಿಗಳನ್ನು ಗೌರವಿಸುವದರ ಮೂಲಕ ಇತರರಿಗೆ ಸ್ಫ್ಪೂರ್ತಿಯಾಗಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು ಮಾತನಾಡಿ, ಶಿಕ್ಷಕರ ಜೊತೆ ಪೋಷಕರ ನಿರಂತರ ಸಂಪರ್ಕದಿಂದ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಚೇನಂಡ ಸಿ. ಬೋಪಯ್ಯ ಮಾತನಾಡಿದರು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯಶಿಕ್ಷಕ ಮನೋಹರ್ ನಾಯಕ್ ಹಾಗೂ ದಾನಿಗಳನ್ನು ಗೌರವಿಸಿ ಸನ್ಮಾನಿಸ ಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಎಪಿಎಂಸಿ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೇಬಿ ಶಿವಪ್ಪ, ಉಪಾಧ್ಯಕ್ಷ ಮುಂಡ್ಯೋಳಂಡ ರವಿ ಸೋಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ತೋಟಂಬೈಲ್ ಅನಂತ ಕುಮಾರ್, ಶಾಂತಿ, ಬಿಳಿಯಂಡ್ರ ರತೀಶ್ ಕುಮಾರ್, ಕೋಡೀರ ಪ್ರಸನ್ನ, ಸಂಸ್ಥೆಯ ಉಪಾಧ್ಯಕ್ಷ ನಡಿಕೇರಿ ಯಂಡ ಸೋಮಯ್ಯ, ಖಜಾಂಚಿ ಬೊವ್ವೇರಿಯಂಡ ಲವಕುಮಾರ್, ನಿರ್ದೇಶಕ ಜಯರಾಂ, ಪೋಕೋಳಂಡ್ರ ಮನೋಜ್ ಕುಮಾರ್, ಐತಿಚಂಡ ಭೀಮಯ್ಯ, ಚರುವಂಡ ಚರ್ಮಣ್ಣ, ಬಟ್ಟಿಯಂಡ ಮಾದಪ್ಪ, ಬೊವ್ವೇರಿಯಂಡ ಮಂದಣ್ಣ ಇನ್ನಿತರರು ಉಪಸ್ಥಿತರಿದ್ದರು.
- ದುಗ್ಗಳ