ಮಡಿಕೇರಿ, ಡಿ. 27: ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವದು ರೈತಾಪಿ ವರ್ಗದವರನ್ನು ಕಂಗೆಡಿಸುತ್ತಿದೆ. ಒಂದೆಡೆ ಕಾಡಾನೆಗಳ ಉಪಟಳ ಮತ್ತೊಂದೆಡೆ ಹುಲಿ, ಚಿರತೆ ಧಾಳಿ ಅಲ್ಲಲ್ಲಿ ಸಾಮಾನ್ಯವೆಂಬಂತಾಗಿದೆ. ಇದೀಗ ಈ ಸಾಲಿಗೆ ಕಾಡುಕೋಣಗಳೂ ಸೇರಿಕೊಂಡಿವೆ. ಹಿಂಡಾಗಿ ಕಾಫಿ ತೋಟಗಳಿಗೆ ಲಗ್ಗೆಯಿಡುತ್ತಿರುವ ಕಾಡುಕೋಣಗಳು ಆನೆಗಳಿಗಿಂತ ಹೆಚ್ಚಾಗಿ ಕಾಫಿ ತೋಟವನ್ನು ನಾಶಮಾಡುತ್ತಿವೆ. ಆನೆಗಳು ಆಹಾರ ಅರಸಿ ತೋಟದ ಮೂಲಕ ಸಂಚರಿಸುವದು ಮಾತ್ರವಾದರೆ ಕಾಡುಕೋಣಗಳು ಬೆಳೆದು ನಿಂತ ಕಾಫಿ ಗಿಡಗಳನ್ನು ನೆಲಸಮ ಮಾಡುತ್ತಿರುವದು ಆತಂಕಕಾರಿಯಾಗಿದೆ. ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಬೆಳೆಗಾರರೊಬ್ಬರ ತೋಟಕ್ಕೆ ಒಂದೆರಡು ದಿನದಿಂದ ಸತತವಾಗಿ ಲಗ್ಗೆಯಿಡುತ್ತಿರುವ ಸುಮಾರು ಏಳೆಂಟು ಸಂಖ್ಯೆಯಲ್ಲಿರುವ ಕಾಡುಕೋಣಗಳು ತೋಟವನ್ನು ಧ್ವಂಸಗೊಳಿಸಿವೆ.

ಕಾಯಪಂಡ ರಾಮು ಪೆಮ್ಮಯ್ಯ ಅವರ ತೋಟದಲ್ಲಿ ಈ ಘಟನೆ ನಡೆದಿದ್ದು, ಸುಮಾರು 150ರಷ್ಟು ಕಾಫಿ ಗಿಡಗಳು ಬುಡಸಹಿತವಾಗಿ ನೆಲಕಚ್ಚಿವೆ. ಬೆಳೆದುನಿಂತಿದ್ದ ಕಾಫಿ ಫಸಲು ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಮಣ್ಣಿನಡಿ ಸೇರಿವೆ. ಗಿಡದ ರೆಂಬೆಗಳು ಮುರಿದು ಅನತಿ ದೂರದಲ್ಲಿ ಬಿದ್ದಿವೆ. ಕಾಡುಕೋಣಗಳು ಪರಸ್ಪರ ಕಾದಾಟ ನಡೆಸಿರುವ ಸಾಧ್ಯತೆ ಇದ್ದು, ಸ್ಥಳದಲ್ಲಿ ರಕ್ತವೂ ಗೋಚರಿಸಿದೆ. ಇಷ್ಟು ಜಾಗದಲ್ಲಿ ಕಾಫಿ ಗಿಡಗಳು ಇರಲಿಲ್ಲವೋ ಎಂಬಂತೆ ಕಂಡು ಬರುತ್ತಿದೆ. ಕಾದಾಟದ ರಭಸಕ್ಕೆ ಕಾಫಿ ತೋಟ ಆಟದ ಮೈದಾನದಂತೆ ಪರಿವರ್ತನೆಯಾಗಿದ್ದು, ಕಾಫಿ ಕುಯಿಲಿನ ಸಂದರ್ಭದಲ್ಲಿ ನಡೆದ ಈ ಧಾಳಿಯಿಂದ ಬೆಳೆಗಾರರಿಗೆ ಅಪಾರ ನಷ್ಟ ಸಂಭವಿಸಿದೆ. ಇಂದು ಸ್ಥಳಕ್ಕೆ ಬಿರುನಾಣಿ ವ್ಯಾಪ್ತಿಯ ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ತಕ್ಷಣ ಇಲಾಖೆ ನಷ್ಟ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.