ಚಿತ್ರ ವರದಿ ಎ.ಎನ್. ವಾಸು ಸಿದ್ದಾಪುರ, ಡಿ. 27: ಮತ್ತೊಮ್ಮೆ ವ್ಯಾಘ್ರನ ಅಟ್ಟಹಾಸಕ್ಕೆ ಐದು ಜಾನುವಾರುಗಳು ಬಲಿಯಾಗಿರುವ ಘಟನೆ ಸಿದ್ದಾಪುರ ಸಮೀಪದ ಬಜೆಕೊಲ್ಲಿಯ ಆಲೇತೋಪು ಕಾಫಿ ತೋಟದಲ್ಲಿ ಸಂಭವಿಸಿದೆ.ಬಜೆಕೊಲ್ಲಿ ನಿವಾಸಿ ಮೊಹಮ್ಮದ್ ಇವರಿಗೆ ಸೇರಿದ ಹಾಲು ಕರೆಯುವ ಹಸು ಸೇರಿದಂತೆ ಇತರ 4 ಜಾನುವಾರಗಳನ್ನು ಮೇಯಲು ಬಿಡುತ್ತಿದ್ದರು ಎನ್ನಲಾಗಿದೆ. ಮೇಯಲು ಬಿಟ್ಟ ಹಸು ಕರುಗಳು ಎಂದಿನಂತೆ ಸಂಜೆ ಹಿಂತಿರುಗಿ ಬರುತ್ತಿದ್ದವು. ವೃದ್ಧನಾಗಿರುವ ಮೊಹಮ್ಮದ್ ಸಾಕುತ್ತಿದ್ದ ಜಾನುವಾರುಗಳು ಮೇಯಲು ಹೋದ ನಂತರ 1 ವಾರ ಕಳೆದರೂ ಹಿಂತಿರುಗಿ ಬರಲಿಲ್ಲ. ಮೊಹಮ್ಮದ್ ಅವರು ವಯಸ್ಸಾದ ಕಾರಣ ಹಾಗೂ ಅವರ ಮಗ ಉಂಬ್ರಕ್ಕೆ ತೆರಳಿದ ಹಿನ್ನೆಲೆಯಲ್ಲಿ ಹುಡುಕಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಕಳೆದೆರೆಡು ದಿನಗಳ ಹಿಂದೆ ಆಲೇತೋಪು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೊಳೆತ ದುರ್ವಾಸನೆ ಬರುವದನ್ನು ಗಮನಿಸಿದ್ದು, ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕಾಣದೇ ಕಂಗಾಲಾಗಿದ್ದ ಮೊಹಮ್ಮದ್ ಅವರ ಮಕ್ಕಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 5 ಜಾನುವಾರುಗಳನ್ನು ಬೇಟೆಯಾಡಿ ಕೊಂದು ತಿಂದು ಹುಲಿಯು ಅದರ ಅಸ್ಥಿಪಂಜರಗಳು, ಅವಶೇಷಗಳನ್ನು ಅಲ್ಲೆ ಬಿಟ್ಟಿದ್ದು ಕಂಡು ಬಂದಿದೆ. ವ್ಯಾಘ್ರವು ಧಾಳಿ ನಡೆಸಿ ಸಾಯಿಸಿದ 5 ಜಾನುವಾರಗಳ ಪೈಕಿ 1 ಹಾಲು ಕರೆಯುವ ಹಸು, ಇನ್ನೊಂದು 5 ತಿಂಗಳ ಗರ್ಭಧರಿಸಿದ ಹಸು ಹಾಗೂ 6 ತಿಂಗಳ ಕರು ಸೇರಿದಂತೆ ಇನ್ನಿತರ 2 ಹಸುಗಳನ್ನು

(ಮೊದಲ ಪುಟದಿಂದ) ಬಲಿತೆಗೆದು ಕೊಂಡು ಭಕ್ಷಿಸಿದೆ. ಕಾಫಿ ತೋಟದ ಮಧ್ಯದೊಳಗೆ ಈ ಧಾಳಿ ನಡೆದಿದ್ದು, ಈ ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಕ್ತಿಯೊಂದಿಗೆ ಜಾನುವಾರುಗಳ ಮಾಲೀಕರ ಮಗ ಪಿ. ಮಹಮ್ಮದ್ ಮಾತನಾಡಿ, ತನ್ನ ತಂದೆಗೆ ಜಾನುವಾರಗಳೆಂದರೆ ಅತೀವ ಪ್ರೀತಿ; ಈ ಹಿನ್ನೆಲೆಯಲ್ಲಿ ಅವರು ವಯಸ್ಸಾಗಿದ್ದರೂ ಕೂಡ ಜಾನುವಾರು ಗಳನ್ನು ರಸ್ತೆಯ ಬದಿಯಲ್ಲಿಯೆ ದಿನಂಪ್ರತಿ ಮೇಯುಸುತ್ತಿದ್ದರು. ಕಳೆದ 1 ವಾರಗಳಿಂದ ಜಾನುವಾರುಗಳು ಮನೆಗೆ ಬಾರದ ಕಾರಣ ತಾನು ಎಲ್ಲರ ಬಳಿ ತೆರಳಿ ಹಸುಗಳನ್ನು ಪತ್ತೆ ಹಚ್ಚಿ ಕೊಟ್ಟಲ್ಲಿ ತಲಾ ರೂ. 500 ನೀಡುವದಾಗಿ ತಿಳಿಸಿದ್ದೆನು. ಆದರೆ ಸಮೀಪದ ಸುತ್ತಮುತ್ತಲ ತೋಟದಲ್ಲಿ ಹುಡುಕಿದರೂ ಜಾನುವಾರುಗಳ ಪತ್ತೆಯಾಗಲಿಲ್ಲ ಎಂದು ಹೇಳಿದರು.

ಈ ಭಾಗದಲ್ಲಿ ಹುಲಿಯನ್ನು ಹಲವಾರು ಮಂದಿ ಪ್ರತ್ಯಕ್ಷವಾಗಿ ನೋಡಿದ್ದು, ಇದರಿಂದ್ದಾಗಿ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದ ಅವರು, ಅಂದಾಜು ರೂ. 1.50 ಲಕ್ಷ ನಷ್ಟ ಸಂಭವಿಸಿದೆ ಎಂದರು.

ಸ್ಥಳಕ್ಕೆ ಭೇಟಿ ನೀಡಿದ ವೀರಾಜಪೇಟೆ ವಲಯ ಉಪ ಅರಣ್ಯ ಅಧಿಕಾರಿ ಗಣೇಶ್ ಭೇಟಿ ನೀಡಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, 5 ಜಾನುವಾರುಗಳು ಮೃತಪಟ್ಟ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಹುಲಿಯ ಚಲನ ವಲನ ಕಂಡು ಹಿಡಿಯಲು ಸಿ.ಸಿ. ಕ್ಯಾಮೆರಾಗಳನ್ನು ಆಳವಡಿಸಿ ಬಳಿಕ ಕಾಫಿ ತೋಟದ ಒಳಗೆ ಹುಲಿ ಸೆರೆಹಿಡಿಯಲು ಬೋನ್ ಇರಿಸಲಾಗುವದೆಂದು ತಿಳಿಸಿದರು. ನಷ್ಟ ಪರಿಹಾರದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದೆಂದರು. ಈ ಭಾಗದ ಆಲೇತೋಪು ತೋಟದ ಒಳಗಿರುವ ಮನೆಯ ಸಮೀಪದಲ್ಲಿ ಆಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಹುಲಿಯು ಕಾಫಿ ಕಣದಲ್ಲಿ ನಡೆದಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ ಎನ್ನಲಾಗಿದೆ. ಮಾಲ್ದಾರೆ ಸಮೀಪದ ಗೇಟ್ ಹಾಡಿ ನಿವಾಸಿ ಇಂದಿರಾ ಎಂಬವರಿಗೆ ಸೇರಿದ 2 ಜಾನುವಾರುಗಳ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿದ ಘಟನೆಯ ಹಿನ್ನೆಲೆಯಲ್ಲಿ ಆ ಭಾಗದ ಜೋಸ್ ಕುರಿಯನ್ ಎಂಬವರ ಕಾಫಿ ತೋಟ ದೊಳಗೆ ಸಿ.ಸಿ. ಕ್ಯಾಮೆರಾ ಹಾಗೂ ಬೋನ್‍ಗಳನ್ನು ಇರಿಸಲಾಗಿತ್ತು. ಆದರೆ ಹುಲಿಯು ಸೆರೆಯಾಗ ದಿರುವದು ಅರಣ್ಯ ಇಲಾಖೆಗೆ ತಲೆ ನೋವಾಗಿದೆ. ಇದೀಗ ಮತ್ತೊಮ್ಮೆ ಹುಲಿಯು ಬಜೆಕೊಲ್ಲಿಯಲ್ಲಿ ಜಾನುವಾರುಗಳನ್ನು ಸಾಯಿಸಿ ತಿಂದು ಹಾಕಿ ತೋಟದ ಸುತ್ತಮುತ್ತ ಪ್ರತ್ಯಕ್ಷವಾಗುತ್ತಿರುವದು ಆತಂಕ ಮನೆಮಾಡಿದೆ. ಇದೀಗ ಕಾಫಿ ಕೊಯ್ಲು ಆರಂಭವಾಗಿದ್ದು ಕಾರ್ಮಿಕರು ಕೆಲಸಕ್ಕೆ ತೋಟದೊಳಗೆ ಹೋಗಲು ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಮೈಲಾತ್‍ಪುರ ಬಳಿ ರಸ್ತೆ ಬದಿಯಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು, ಈರ್ವರು ಯುವಕರು ಬೈಕಿನಲ್ಲಿ ತೆರಳುವ ಸಂದರ್ಭ ಹುಲಿಯ ಚಿತ್ರವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದರು.