ಗೋಣಿಕೊಪ್ಪ ವರದಿ, ಡಿ. 25 : ಗುಹ್ಯ ಅಕ್ವವೆಂಚುರ್ಸ್ ಮೀನುಗಾರಿಕೆ ಕೇಂದ್ರದಲ್ಲಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ವಿಸ್ತರಣಾ ಶಿಕ್ಷಣ ಘಟಕ ವತಿಯಿಂದ ಅಂತರ್ರಾಷ್ಟ್ರೀಯ ರೈತರ ದಿನಾಚರಣೆ ಪ್ರಯುಕ್ತ ಒಳನಾಡು ಮೀನುಗಾರಿಕೆ ತರಬೇತಿ ಕಾರ್ಯಕ್ರಮ ನಡೆಯಿತು.
ಮೀನುಕೃಷಿಯಲ್ಲಿ ಕಳೆದ 5-6 ವರ್ಷಗಳಿಂದ ತೊಡಗಿಕೊಂಡು ಅತ್ಯುತ್ತಮ ಸಾಧನೆ ತೋರುತ್ತಿರುವ ಶ್ಯಾಮ್ ಅಯ್ಯಪ್ಪ ಹಾಗೂ ಬಬಿನ್ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು. ಪ್ರಾತ್ಯಕ್ಷಿಕೆಯಲ್ಲಿ, ತೊಟ್ಟಿಗಳಲ್ಲಿ ಮೀನುಗಳಿಗೆ ಆಹಾರ ಒದಗಿಸುವ ವಿಧಾನ, ಕೊಯ್ಲು, ಉಷ್ಣಾಂಶ ನಿರ್ವಹಣೆ, ನೀರಿನ ನಿರ್ವಹಣೆ ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಮೀನು ಕೃಷಿಯ ಮಾಹಿತಿ ನೀಡಿದ ಕೃಷಿಕ ಬಬಿನ್ ಬೋಪಣ್ಣ, ವಿವಿಧ ಜಾತಿಯ ಮೀನುಗಳು, ಅವುಗಳನ್ನು ಸಾಕುವ ವಿಧಾನ ಮತ್ತು ಲಭ್ಯ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಕೃಷಿಕ ಶ್ಯಾಮ್ ಅಯ್ಯಪ್ಪ ಮಾತನಾಡಿ, ಮೀನುಕೃಷಿಯಿಂದ ಆರ್ಥಿಕ ಸಬಲೀಕರಣ ಹೇಗೆ ಸಾಧಿಸಬಹುದು, ತಾವು ಪಾಲಿಸುತ್ತಿರುವ ಪದ್ಧತಿಯಲ್ಲಿ 60*40 ಅಡಿ ಅಳತೆಯ ಒಂದು ತೊಟ್ಟಿಯಿಂದ ಆರು ತಿಂಗಳ ಅವಧಿಯಲ್ಲಿ 50 ರಿಂದ 60 ಸಾವಿರ ರೂ. ಗಳ ನಿವ್ವಳ ಆದಾಯ ಪಡೆಯುವದಾಗಿ ತಿಳಿಸಿದರು. ಪ್ರಸ್ತುತ ಮಾರುಕಟ್ಟೆಯ ಬೇಡಿಕೆ ಬಹಳಷ್ಟಿದ್ದು ಇನ್ನೂ ಹೆಚ್ಚು ಹೆಚ್ಚು ಜನ ಇದರಲ್ಲಿ ತೊಡಗಿಕೊಳ್ಳಬೇಕೆಂದು ತಿಳಿಸಿದರು.
ಅರಣ್ಯ ಮಹಾವಿದ್ಯಾಲಯದ ನಿವೃತ್ತ ತಜ್ಞ ಎಂ. ಎನ್. ಪೂಣಚ್ಚ ಉದ್ಘಾಟಿಸಿ ಮಾತನಾಡಿ, ಕೊಡಗಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿಪುಲ ಅವಕಾಶಗಳಿವೆ, ಅವುಗಳಲ್ಲಿ ಮೀನು ಕೃಷಿಯೂ ಒಂದು. ಕೃಷಿಕರು ಮೀನುಗಾರಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದೆಂದು ತಿಳಿಸಿದರು. ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್. ಎನ್. ಕೆಂಚರಡ್ಡಿ ಮಾತನಾಡಿ, ಪುಷ್ಪ ಮತ್ತು ಆರ್ಕಿಡ್ ಬೇಸಾಯ, ತರಕಾರಿ ಕೃಷಿ, ಜೇನು ಕೃಷಿ, ಹಣ್ಣು ತರಕಾರಿಗಳ ಮೌಲ್ಯವರ್ಧನೆ ಮತ್ತು ಮೀನುಗಾರಿಕೆ ತರಬೇತಿ ನೀಡುವ ಮೂಲಕ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ಡಾ. ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.