ಮಡಿಕೇರಿ, ಡಿ. 25: ‘ವಿಶ್ವದಲ್ಲೇ ಭಾರತ ಅತ್ಯಂತ ಸುಂದರ ದೇಶ; ಹಿಮಾಲಯದಿಂದ ಕನ್ಯಾಕುಮಾರಿ ತನಕ ಅದೆಷ್ಟು ಸುಂದರ ಗಿರಿ ಶಿಖರ ಗಳು, ನದಿ-ತೊರೆಗಳು, ದೇವ ಮಂದಿರಗಳು, ಪ್ರಕೃತಿ ರಮಣೀಯ ಪ್ರವಾಸಿ ತಾಣಗಳಿವೆ. ಈ ದೇಶದ ರಾಜಧಾನಿ ನವದೆಹಲಿಯಿಂದ ನಂಜರಾಯಪಟ್ಟಣದ ದುಬಾರೆ ಸಹಿತ ಎಷ್ಟೊಂದು ರಮಣೀಯ ಸ್ಥಳಗಳು ಕಾಣಸಿಗುತ್ತವೆ. ಎಂತಹ ಸೌಂದರ್ಯದಿಂದ ಕೂಡಿವೆ... ಆದರೆ ಭಾರತದ ಅಲ್ಲಲ್ಲಿ ಇಷ್ಟೊಂದು ಕೊಳಕು ಏಕೆ ತುಂಬಿಕೊಂಡಿದೆ ?'

ಕೊಡಗಿನ ಸುಂದರ ಪ್ರವಾಸಿ ತಾಣ ದುಬಾರೆಗೆ ಭೇಟಿ ನೀಡಿದ್ದ ದೂರದ ಲಂಡನ್ ಪ್ರವಾಸಿಗ ಡಾ. ಜೂನಿಯನ್ಸ್ ಮೇಲಿನಂತೆ ಉದ್ಗಾರ ತೆಗೆದಾಗ ನಾನೇಕೆ ಇವರನ್ನು ಮಾತನಾಡಿಸಿ ‘ಕೋಲು ಕೊಟ್ಟು ಹೊಡೆಸಿಕೊಂಡೆ’ ಎನಿಸದಿರಲಿಲ್ಲ. ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆ ತಾಣಕ್ಕೆ ತಾ. 11ರಂದು ಭೇಟಿ ನೀಡಿದ್ದ ಜೂಲಿಯನ್ಸ್ ಲಂಡನ್‍ನಲ್ಲಿ ಅಲ್ಲಿಯ ಸೈನ್ಯದ ಓರ್ವ ಅಧಿಕಾರಿ, ಮಾತ್ರವಲ್ಲದೆ ಸೈನಿಕ ಆಸ್ಪತ್ರೆಯ ವೈದ್ಯರಾಗಿದ್ದಾರೆ.

ಲಂಡನ್‍ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮೈಸೂರಿನ ಕನ್ನಡತಿ ರೂಪಾ ಎಂಬವರೊಂದಿಗೆ ಭಾರತ ಪ್ರವಾಸದಲ್ಲಿರುವ ಅವರು, ಈ ಭಾರತ ಮತ್ತು ಇಲ್ಲಿನ ಒಂದೊಂದು ಸ್ಥಳ ಅದೆಷ್ಟು ಸುಂದರ ಎಂದು ಮತ್ತೆ ಮತ್ತೆ ನುಡಿದರು. ದುಬಾರೆಯ ರ್ಯಾಫ್ಟಿಂಗ್‍ನಲ್ಲಿ ವಿಹರಿಸುವ ಮೂಲಕ ಕಾವೇರಿಯ ಜುಳು-ಜುಳು ನಿನಾದ ಕೇಳಿ ಪುಳಕಗೊಂಡರು. ಸಂಜೆ 4.30ರಿಂದ 5.30ರ ಅವಧಿಯಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಸಂಚರಿಸುವ ಮೂಲಕ, ಗಜಪಡೆಯ ನಡುವೆ ಕಾವಾಡಿಗರು ಅವುಗಳಿಗೆ ಆಹಾರ ತಿನ್ನಿಸುವದನ್ನು ಕಂಡು ಹರ್ಷವನ್ನು ವ್ಯಕ್ತಪಡಿಸಿದರು.

ಈ ವೇಳೆ ಜೂಲಿಯನ್ಸ್ ತಾನು ಭಾರತದ ಪ್ರಪ್ರಥಮ ಮಹಾ ಸೇನಾ ದಂಡ ನಾಯಕರಾಗಿದ್ದ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಹುಟ್ಟೂರು ಕೊಡಗಿಗೆ ಭೇಟಿ ನೀಡಿದ್ದೇನೆ ಎನ್ನುವ ಅರಿವು ಇರುವ ದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ಮತ್ತೆ ಮತ್ತೆ ಎಂತಹ ಸುಂದರ ತಾಣ ಎಂದು ನಗು ಬೀರುತ್ತಲೇ ಹೆಜ್ಜೆ ಹಾಕಿದರು.

ಆ ಮೂಲಕ ಮಾತಿಗಿಳಿದ ಲಂಡನ್ ಸೈನ್ಯಾಧಿಕಾರಿ, ಇಷ್ಟೊಂದು ಸೌಂದರ್ಯ ವಿರುವ ಭಾರತದ ಪ್ರಾಕೃತಿಕ ತಾಣಗಳು ಹಾಗೂ ದೇವಾಲಯಗಳ ಸಹಿತ ಸಾರ್ವಜನಿಕ ಸ್ಥಳಗಳನ್ನು ಜನರು ಯಾಕೆ ಶುಚಿಯಾಗಿ ಇಟ್ಟುಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಕನ್ನಡತಿ ರೂಪ ಹೆಚ್ಚಿನ ವಿಷಯ ತಿಳಿಸಿದರು.

ನವದೆಹಲಿಗೆ ವಿಮಾನದಲ್ಲಿ ಬಂದಿಳಿಯುವದರೊಂದಿಗೆ ದೇಶದ ಅನೇಕ ಕಡೆ ಸುತ್ತಾಡಿಕೊಂಡು ಮೈಸೂರಿಗೆ ಬಂದೆವು. ಮೈಸೂರಿನ ದೇವಾಲಯಕ್ಕೆ ಕರೆದುಕೊಂಡು ಹೋಗಿ ದರ್ಶನ ಪಡೆದು ಹೊರ ಬಂದೆವು. ಹೊರಬರುವಷ್ಟರಲ್ಲಿ ಪಕ್ಕದಲ್ಲೇ ಯಾರೋ ಊಟ ಮಾಡಿ ಎಸೆದಿದ್ದ ವಸ್ತುಗಳ ಸಹಿತ ಕಸದ ರಾಶಿ ಕಂಡು ತುಂಬ ಬೇಸರಗೊಂಡರು.

ಇಲ್ಲಿ ನಂಜರಾಯಪಟ್ಟಣಕ್ಕೆ ಬಂದಾಗ, ವಾಹನ ನಿಲುಗಡೆ ಜಾಗದಲ್ಲಿ ಕಸವೇ ಕಾಣುತ್ತಿದ್ದು, ಪ್ರವಾಸಿಗರು ಬೀದಿ ನಡುವೆ ಅಡುಗೆ ತಯಾರಿಸಿ ಅಲ್ಲಲ್ಲಿ ತಿಂದು ಎಸೆಯುತ್ತಿರುವದು ಜೂಲಿಯನ್ಸ್‍ಗೆ ತುಂಬಾ ಬೇಸರ ಉಂಟುಮಾಡಿದೆ ಎಂದು ‘ಶಕ್ತಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು.

ಈ ವೇಳೆ ವಿಷಾದದ ನೋಟ ಬೀರಿದ ಲಂಡನ್ ಪ್ರಜೆ ಮತ್ತೆ ನನ್ನೆಡೆಗೆ ಕೈ ಚಾಚಿ ಹಸ್ತ ಲಾಘವ ದೊಂದಿಗೆ ಕಾವೇರಿ ತಟದಿಂದ ತಾವು ಬಂದಿದ್ದ ವಾಹನದತ್ತ ಹೆಜ್ಜೆ ಹಾಕಿದಾಗ, ಸ್ವಚ್ಛ ಭಾರತ ಅಭಿಯಾನ ಮತ್ತು ವಿದೇಶೀ ಪ್ರಜೆ ನಮ್ಮ ರಾಷ್ಟ್ರದ ಅಶುಚಿತ್ವದಿಂದ ಕೊರಗುತ್ತಾ ಸಾಗಿದ್ದನ್ನು ನೆನೆದು ನವದೆಹಲಿಯ ಬೀದಿಯಲ್ಲಿ ವರ್ಷಗಳ ಹಿಂದೆ, ದೇಶದ ಪ್ರಧಾನಿ ನರೇಂದ್ರ ಮೋದಿ ಪೊರಕೆ ಹಿಡಿದು ರಸ್ತೆಯಲ್ಲಿ ಕಸ ಗುಡಿಸಿದ ಆಶಯದ ಹಿಂದಿರುವÀ ಸಂದೇಶ ದೇಶದೊಳಗಿನ ನಂಜರಾಯ ಪಟ್ಟಣದಂತಹ ಸಾವಿರಾರು ಗ್ರಾ.ಪಂ. ಗಳಿಗೆ ಇನ್ನೂ ಅರ್ಥವಾಗಿಲ್ಲವೇನೋ ಎಂಬ ಮರು ಪ್ರಶ್ನೆ ಹುಟ್ಟಿಕೊಂಡಿತು.

-ಶ್ರೀಸುತ.