ಸಿದ್ದಾಪುರ, ಡಿ. 24: ಮುಂದಿನ ಶೈಕ್ಷಣಿಕ ವರ್ಷದಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಐದನೇ ತರಗತಿಯವರೆಗೆ ಆಂಗ್ಲ ಮಾದ್ಯಮ ತರಗತಿಯನ್ನು ಆರಂಭಿಸಲಾಗುವದು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ತಿಳಿಸಿದರು.ಸಿದ್ದಾಪುರ ಪ್ರೌಢಶಾಲೆಯ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರ ಪ್ರೌಢಶಾಲೆಯನ್ನು 2017-18 ನೇ ಸಾಲಿನಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ತನ್ನ ಅದೀನಕ್ಕೆ ಪಡೆದುಕೊಂಡಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಎಲ್.ಕೆ.ಜಿ ಯಿಂದ ಐದನೇ ತರಗತಿಯವರೆಗೆ ಆಂಗ್ಲ ಮಾದ್ಯಮದ ತರಗತಿ ಆರಂಭಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸುತ್ತಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವದು ಟ್ರಸ್ಟ್‍ನ ಉದ್ದೇಶವಾಗಿದೆ ಎಂದರು. ಪ್ರವೇಶ ಶುಲ್ಕದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗುವದು ಎಂದರು.

ಆದಿಚುಂಚನಗಿರಿಯಲ್ಲಿ ಈಗಾಗಲೇ 3 ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿಯೊಂದಿಗೆ ಶಿಕ್ಷಣ ನೀಡುತ್ತಿದೆ ಎಂದ ಅವರು ಸಿದ್ದಾಪುರ ವ್ಯಾಪ್ತಿಯಲ್ಲೂ ಗುಣಮಟ್ಟದ ಶಿಕ್ಷಣ ಕಡಿಮೆ ದರದಲ್ಲಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಗ್ರಾಮೀಣ ಭಾಗವಾದಕಾರಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ವಾಹನದ ವ್ಯವಸ್ಥೆಯನ್ನೂ ಕೂಡ ಒದಗಿಸುವದು ಹಾಗೂ ವಸತಿ ಶಾಲೆಯನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಂಡೇಪಂಡ ರಮೇಶ್, ಕಾರ್ಯದರ್ಶಿ ಪಟ್ಟಡ ಅಶೋಕ್ ಕುಶಾಲಪ್ಪ, ನಿರ್ದೇಶಕರಾದ ವೇಣುಗೋಪಾಲ್ ಇದ್ದರು.