ಕುಶಾಲನಗರ, ಡಿ. 24 : ಸಮಾಜಗಳು ಒಮ್ಮತದಿಂದ ಏಕಮನಸ್ಸಿನೊಂದಿಗೆ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಗೌಡ ಸಮಾಜದ ಸಂತೋಷಕೂಟ ಸಮಾರಂಭ-2017 ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಲವು ಸಂಸ್ಕøತಿಗಳ ಸಮ್ಮಿಲನವಾದ ಗೌಡ ಸಂಸ್ಕøತಿ ಪ್ರಸಕ್ತ ವಿಭಜನೆಯಾಗುವದರೊಂದಿಗೆ ಸಮಸ್ಯೆ ಎದುರಿಸುತ್ತಿದೆ. ಇತಿಹಾಸವನ್ನು ದಾರಿತಪ್ಪಿಸಿ ಮಾಹಿತಿ ನೀಡುತ್ತಿರುವದು ನಡೆಯುತ್ತಿದೆ. ಕೃಷಿ ಸಂಸ್ಕಾರ ಹೊಂದಿದ ಜನಾಂಗವಾಗಿದ್ದು ಪಂಗಡಗಳ ವಿಭಜನೆಯಿಂದ ಎಲ್ಲೆಡೆ ಒಗ್ಗಟ್ಟಿನ ಕೊರತೆ ಸೃಷ್ಟಿಯಾಗಿದೆ.

ಕೊಡಗು ಜಿಲ್ಲೆಯ ದಾಖಲೆ ಪ್ರಕಾರ 3ನೇ ಶತಮಾನದಲ್ಲಿ ತಲಕಾಡಿನ ಗಂಗರು ಆಳಿದ್ದು ಮೂಲತಃ ಕೃಷಿಕರಾಗಿದ್ದು ಜಿಲ್ಲೆಯ ಮೊದಲ ರಾಜರೇ ಒಕ್ಕಲಿಗರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆ ಸೇರಿದಂತೆ ನೆರೆಯ ವ್ಯಾಪ್ತಿಯಲ್ಲಿ ಹಿಂದು ಸಂಸ್ಕøತಿಯನ್ನು ಉಳಿಸುವಲ್ಲಿ ಒಕ್ಕಲಿಗರ ಪಾತ್ರ ಹಿರಿದಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಗುಡ್ಡೆಮನೆ ಅಪ್ಪಯ್ಯಗೌಡ ಮತ್ತಿತರರ ಸ್ಮರಣೆಗಾಗಿ ಅವರ ಹೆಸರನ್ನು ಬೆಂಗಳೂರಿನ ಪ್ರಮುಖ ರಸ್ತೆಗಳ ವೃತ್ತಕ್ಕೆ, ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡಲು ಸರಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಚಿಕ್ಕರಂಗೇಗೌಡ ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಗೌಡ ಸಮುದಾಯ ಸೇರಿದಂತೆ ಕೊಡಗು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಗುಂಡುರಾಯರ ಕೊಡುಗೆ ಅಪಾರವಾಗಿದ್ದು, ಕುಶಾಲನಗರ ಆಧುನಿಕತೆಯತ್ತ ಬೆಳವಣಿಗೆಗೆ ಸಹಕರಿಸಿದ ಬಗ್ಗೆ ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕುಶಾಲನಗರ ಡಿವೈಎಸ್ಪಿ ಪೆರುಬಾಯಿ ಮುರಳೀಧರ್, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಗಳ ಬಗ್ಗೆ ವೈರುಧ್ಯ ಸಂದೇಶಗಳನ್ನು ಬಿತ್ತುತ್ತಿರುವದು ವಿಷಾದನೀಯ. ಎಲ್ಲರನ್ನು ನಮ್ಮವರು ಎಂದು ಭಾವಿಸುವದರೊಂದಿಗೆ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಒಕ್ಕಲಿಗ ಸಮಾಜದ ಮುಖಂಡರಾದ ಜೆ.ನಾಗರಾಜ್, ಜನಾಂಗ ಪ್ರಮುಖರಾದ ಪುತ್ತೂರು ತೆಂಕಿಲ ಅನಂತರಾಜೇಗೌಡ, ಗೌಡ ಯುವಕ ಸಂಘದ ಅಧ್ಯಕ್ಷ ಪಂಜಿಪಳ್ಳ ಯತೀಶ್, ಪದ್ಮಾವತಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪ್ರಮೀಳ ಮೋಹನ್, ಮಾಜಿ ಸೈನಿಕರ ಸಂಘದ ಪ್ರಮುಖರಾದ ಕುಂಬುಗೌಡನ ಸೋಮಣ್ಣ, ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಸೂದನ ಗೋಪಾಲ್, ಗೌಡ ಮಹಿಳಾ ವೇದಿಕೆಯ ಪಟ್ಟಂದಿ ಬೀನಾ ಸೀತಾರಾಂ, ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಇದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಮಾಜದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಬೈಮನ ಬೋಜಮ್ಮ ಪ್ರಾಸ್ತಾವಿಕ ನುಡಿಗಳಾಡಿದರು, ಸಾಂಸ್ಕøತಿಕ ವೇದಿಕೆ ತಂಡದಿಂದ ಗೌಡ ಸಮಾಜದ ಮಾಜಿ ಕಾರ್ಯದರ್ಶಿ ಹಾಗೂ ಒಕ್ಕೂಟದ ನಿರ್ದೇಶಕ ಕರಂದ್ಲಾಜೆ ಆನಂದ್ ಸ್ವಾಗತಿಸಿ, ಪಟ್ಟಡ ಶಿವಕುಮಾರ್ ನಿರೂಪಿಸಿ, ಕಾರ್ಯದರ್ಶಿ ಬೈಮನ ಪೊನ್ನಪ್ಪ ವಂದಿಸಿದರು.