ಸೋಮವಾರಪೇಟೆ,ಡಿ.22: ಸಮೀಪದ ಕಾನ್ವೆಂಟ್‍ಬಾಣೆ-ಹಾನಗಲ್ಲು ಬಾಣೆ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಹೊಳೆಗೆ ನಿರ್ಮಿಸಿರುವ ಸಂಪರ್ಕ ಸೇತುವೆ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಅಡ್ಡೆಯಾಗಿ ಮಾರ್ಪಟ್ಟಿದೆ.

ಕಾನ್ವೆಂಟ್‍ಬಾಣೆಯಿಂದ ಗದ್ದೆಯ ಮೂಲಕ ಹಾನಗಲ್ಲು ಬಾಣೆಗೆ ಸಂಪರ್ಕ ಕಲ್ಪಿಸುವಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೂ. 5 ಲಕ್ಷ ವೆಚ್ಚದ ಕಿರು ಸೇತುವೆಯ ಮೇಲೆ ಕೆಲ ಜೂಜುಕೋರರು ನಿರಂತರವಾಗಿ ಇಸ್ಪೀಟ್ ಆಡುತ್ತಿದ್ದಾರೆ.

ಈ ಬಗ್ಗೆ ಹಲವಷ್ಟು ಬಾರಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಸಹ ಒಮ್ಮೆಯೂ ಪೊಲೀಸರು ಇತ್ತ ತಲೆಹಾಕಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಕಾನ್ವೆಂಟ್ ಬಾಣೆಯಲ್ಲಿರುವ ಓಎಲ್‍ವಿ ಕಾನ್ವೆಂಟ್, ಹಾನಗಲ್ಲು ಗ್ರಾಮದಲ್ಲಿರುವ ಸಂತ ಜೋಸೆಫರ ವಿದ್ಯಾಸಂಸ್ಥೆಗಳಿಗೆ ಈ ಮಾರ್ಗದ ಮೂಲಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಕೆಲಸಕ್ಕೆ ತೆರಳುವ ಮಹಿಳೆಯರು ಸಂಚರಿಸುತ್ತಿದ್ದು, ಆ ಸಂದರ್ಭವೂ ಸಹ ಜೂಜುಕೋರರು ಇಸ್ಪೀಟ್‍ನಲ್ಲಿ ಮುಳುಗಿರುತ್ತಾರೆ.