ನಾಪೋಕ್ಲು, ಡಿ. 21: ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಯಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್‍ನ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಎಂ. ಧನಂಜಯ ಹೇಳಿದರು. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಮಕ್ಕಳನ್ನು ಯಾರೂ ವಂಚಿಸಲು ಸಾಧ್ಯವಿಲ್ಲ. ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಾವು ಬೆಳೆದ ತರಕಾರಿ ಹಣ್ಣು-ಹಂಪಲುಗಳಿಗೆ ಉತ್ತಮ ಬೆಲೆ ಪಡೆಯಲು ಪ್ರಯತ್ನಿಸಬೇಕು ಎಂದರು.

ಭಾಷಾ ಸಂಘವನ್ನು ಉದ್ಘಾಟಿಸಿದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ಮಾತನಾಡಿ, ಇತ್ತೀಚಿನ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳು ಯಾವದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ. ಭಾಷಾ ಬೆಳವಣಿಗೆಯಿಂದ ನಾಡು-ನುಡಿ ಉಳಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೈಸೂರು ಗ್ರಾಹಕರ ಪರಿಷತ್‍ನ ಸಂಚಾಲಕ, ನಿವೃತ್ತ ರಸಾಯನ ಶಾಸ್ತ್ರಜ್ಞ ಡಾ. ಸಿ.ವಿ. ನಾಗರಾಜ್ ಕಲಬೆರಕೆ ವಸ್ತುಗಳು ಉಂಟಾಗುವ ವಿಧಾನಗಳು ಅವುಗಳಲ್ಲಿ ಕಲಬೆರಕೆ ಯಾಗಿರುವ ವಸ್ತುಗಳು ಗ್ರಾಹಕರು ಮೋಸ ಹೋಗುವ ವಿಧಗಳು ಹಾಗೂ ಮೋಸ ಹೋದಾಗ ಗ್ರಾಹಕನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕುಶಾಲನಗರದ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಪ್ಪೇರಂಡ ಚೆಂಗಪ್ಪ, ಗ್ರಾಹಕರ ವೇದಿಕೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಸೈನಾರ್ ವಹಿಸಿದ್ದರು. ರೋಟರಿ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಕುಲ್ಲೇಟಿರ ಅಜಿತ್ ನಾಣಯ್ಯ, ಪ್ರಾಂಶುಪಾಲೆ ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಬಿ.ಎಂ. ಶಾರದ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಖಜಾಂಚಿ ಕೆ.ಎಂ. ಗಿರೀಶ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕಿ ಉಷಾರಾಣಿ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ನಿವೇದಿತಾ ಸುವರ್ಣ, ಅಚ್ಚಗಾರ್ ಫಾತಿಮ ಕಾರ್ಯಕ್ರಮ ನಿರೂಪಿಸಿ, ಶಾಲಾ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ರಮ್ಯಾ ವಂದಿಸಿದರು.