ಕುಶಾಲನಗರ, ಡಿ. 20: ವಾಟ್ಸ್ಯಾಪ್ ಗ್ರೂಪ್‍ವೊಂದರಲ್ಲಿ ಸೋಮವಾರಪೇಟೆಯ ನಿವಾಸಿಯೊಬ್ಬ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಶಬ್ಧಗಳೊಂದಿಗೆ ನಿಂದಿಸಿ ಸಂದೇಶ ಕಳುಹಿಸಿರುವದಾಗಿ ಆರೋಪಿಸಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸ್ಥಳೀಯರೊಬ್ಬರು ದೂರು ನೀಡಿದ ಪ್ರಕರಣ ನಡೆದಿದೆ.

ಕುಶಾಲನಗರದ ಕೀರ್ತಿರಾಜ್ ಎಂಬವರು ಪೊಲೀಸ್ ಪುಕಾರು ನೀಡಿದ್ದು, ಸೋಮವಾರಪೇಟೆಯ ನಿವಾಸಿ ಶ್ರೀನಾಥ್‍ಗೌಡ ಎಂಬಾತ ಗ್ರೂಪ್‍ವೊಂದರಲ್ಲಿ ಸಂದೇಶ ಕಳುಹಿಸಿದ್ದು, ಅಂಬೇಡ್ಕರ್ ಅವರನ್ನು ನಿಂದಿಸಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಸ್ಥಳೀಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಬಗ್ಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.