ಹೆಬ್ಬಾಲೆ, ಡಿ. 19: ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ವಿರುದ್ಧ ಸಿಡಿದೆದ್ದಿರುವ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸತತ ಮೂರನೇ ಬಾರಿಯೂ ಸಾಮಾನ್ಯ ಸಭೆ ನಡೆಸದೆ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ. ಸಭೆ ರದ್ದುಪಡಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ಜೈನಾಬ, ಪ್ರವಾಸಿತಾಣ ದುಬಾರೆ ವ್ಯಾಪ್ತಿಯಲ್ಲಿ ಪಂಚಾಯಿತಿ ವತಿಯಿಂದ ಅಭಿವೃದ್ಧಿಪಡಿಸಲಾದ ಜಾಗ ಗುರುತಿಸಿ ಪಂಚಾಯಿತಿ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರೂ ಈ ತನಕ ಯಾವದೇ ಪ್ರಯೋಜನ ಆಗಿಲ್ಲ. ಸರ್ವೆ ಮಾಡಿಸುವಂತೆ ಕೇಳಿಕೊಂಡು ನೀಡಿದ ಗಡುವಿನ ಒಳಗೆ ಸ್ಪಂದಿಸದ ಕಾರಣ ಪಂಚಾಯಿತಿ ಆಡಳಿತ ಮಂಡಳಿಯೇ ಧರಣಿ ನಡೆಸಬೇಕಾದ ಸ್ಥಿತಿ ನಿರ್ಮಾಣ ಆಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಇಒ ಚಂದ್ರಶೇಖರ್ ಸರ್ವೇ ಮಾಡಿಸಿ ಜಾಗ ಗುರುತಿಸಿಕೊಡುವ ಭರವಸೆ ನೀಡಿದ್ದರು. ಸರ್ವೆಯೇನೋ ಮುಗಿದಿದೆ ಆದರೆ
ಮುಂದಿನ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇದನ್ನೆಲ್ಲಾ ಗಮನಿಸಿದರೆ ದುಬಾರೆಯ ವ್ಯಾಪಾರಿ ಲಾಬಿ ಜೊತೆ ಕಾರ್ಯ ನಿರ್ವಹಣಾಧಿಕಾರಿ ಕೈಜೋಡಿಸಿರುವ ಶಂಕೆ ಮೂಡುತ್ತಿದೆ ಎಂದು ಆರೋಪಿಸಿದರು.
ದುಬಾರೆ ಪ್ರವಾಸಿ ತಾಣವನ್ನು ಪಂಚಾಯಿತಿ ವತಿಯಿಂದಲೇ ಅಭಿವೃದ್ಧಿಪಡಿಸಿದ್ದು, ಶುಚಿತ್ವ ಸೇರಿದಂತೆ ನಿರ್ವಹಣೆಯ ಜವಾಬ್ದಾರಿ ಪಂಚಾಯಿತಿಯೇ ಹೊತ್ತುಕೊಂಡಿದೆ.
ಆದರೆ ಅಲ್ಲಿ ಇರುವ ಹೊಟೇಲ್, ಅಂಗಡಿ, ರೆಸಾರ್ಟ್, ರ್ಯಾಫ್ಟಿಂಗ್ಗೆ ಪಂಚಾಯಿತಿಯಿಂದ ಯಾವದೇ ಪರವಾನಗಿ ಪಡೆದುಕೊಳ್ಳದೆ ಅನಧಿಕೃತವಾಗಿ ನಡೆಸಲಾಗುತ್ತಿದೆ. ಇದನ್ನು ತಡೆಗಟ್ಟಲು ದುಬಾರೆಯ ಪಂಚಾಯಿತಿ ಜಾಗವನ್ನು ಗ್ರಾಮ ಪಂಚಾಯಿತಿಗೇ ವಹಿಸಬೇಕಿದೆ.
ನಮ್ಮ ಜಾಗ ನಮಗೆ ಸಿಕ್ಕ ಕೂಡಲೇ ಅಲ್ಲಿ ನಡೆಯುತ್ತಿರುವ ಅನಧಿಕೃತ ವ್ಯವಹಾರಗಳನ್ನು ಬಂದ್ ಮಾಡಿಸಿ ಪಂಚಾಯತಿ ಕಾನೂನಿನನ್ವಯ ಮುಟ್ಟು ಗೋಲು ಹಾಕಿಕೊಳ್ಳಲಾಗುವದು.
ರ್ಯಾಫ್ಟಿಂಗ್ ಅಸೋಸಿಯೇಷನ್ ವರ್ಷಕ್ಕೆ 15 ಸಾವಿರ ರೂಪಾಯಿ ಪಂಚಾಯಿತಿಗೆ ಕಟ್ಟುತ್ತಿದ್ದೇವೆ ಎನ್ನುತ್ತಿದ್ದಾರೆ. ಇಂತಹ ಸುಳ್ಳು ಹೇಳುವ ಬದಲು ದಾಖಲೆಗಳನ್ನು ನೀಡಲಿ.
ಪಂಚಾಯಿತಿ ಆಸ್ತಿ ಪಂಚಾಯಿತಿಗೆ ಸೇರುವ ತನಕ ಹೋರಾಟ ಮುಂದುವರಿಯಲಿದೆ. ಯಾವದೇ ಸಭೆ ನಡೆಸದಂತೆ ನಿರ್ಧರಿಸಲಾಗಿದೆ. ಅಗತ್ಯ ವಿದ್ದರೆ ರಾಜೀನಾಮೆ ನೀಡಿ ಸಾರ್ವಜನಿಕರ ಜೊತೆ ಸೇರಿಕೊಂಡು ಹೋರಾಟ ನಡೆಸಲಾಗುವದು ಎಂದರು.
ಉಪಾಧ್ಯಕ್ಷೆ ಕುಮಾರಿ, ಸದಸ್ಯರಾದ ಸುಮೇಶ್, ಲೋಕನಾಥ್, ಕೋಟುಮಾಡ ನವೀನ್, ಆರ್.ಸಿ. ಮಲ್ಲಿಗೆ, ತಮ್ಮಯ್ಯ, ಎಂ.ಎಸ್. ಚಂದ್ರಾವತಿ ಇದ್ದರು.