ತೆಪ್ಪ ಪಲ್ಟಿ : ನಾಲ್ವರ ದಾರುಣ ಸಾವು ಕಲಬುರಗಿ, ಡಿ. 19: ಕೊಹಿನೂರ್ ಗ್ರಾಮದಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ ವನ ಭೋಜನಕ್ಕೆಂದು ಹೊಲಕ್ಕೆ ತೆರಳಿದ್ದ ವೇಳೆ ಓರ್ವ ಬಾಲಕ, ಮೂವರು ಬಾಲಕಿಯರು ಸೇರಿ ನಾಲ್ವರು ನೀರುಪಾಲಾದ ದಾರುಣ ಘಟನೆ ನಡೆದಿದೆ. ಕೋಹಿನೂರ ಗ್ರಾಮದ ತನಜ್ ಬಾನು ಲಾಲ್ ಮೊಹಮ್ಮದ್ (15), ಇಸ್ರಾತ್ ಬಾನು ಇಸ್ಮಾಯಿಲ್ ಖುರೇಶಿ (15), ಜಿಯಾಬಾನು ಸತ್ತಾರ್ (15) ಹಾಗೂ ತಬ್ರೆಜ್ ನಾಜಿರ್ ಸಾಬ್ (12) ಮೃತ ದುರ್ದೈವಿಗಳು. ಕೆರೆಯಲ್ಲಿ ಮೀನುಗಳಿಗೆ ಆಹಾರ ಹಾಕಲು ಬಳಸುವ ತೆಪ್ಪದಲ್ಲಿ ಒಂಬತ್ತು ಮಂದಿ ತೆಪ್ಪ ಹತ್ತಿ ವಿಹಾರಕ್ಕೆಂದು ನೀರಿಗಿಳಿದಿದ್ದಾರೆ. ಆದರೆ ಸಾಮಥ್ರ್ಯಕ್ಕಿಂತ ಹೆಚ್ಚಿನ ಜನ ಕುಳಿತಿದ್ದರಿಂದ ತೆಪ್ಪ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ದುರಂತ ಸಂಭವಿಸಿದೆ. ಇದರಲ್ಲಿ ಐವರು ಈಜಿಕೊಂಡು ಬಂದು ದಡ ಸೇರಿದ್ದಾರೆ. ಆದರೆ ಈಜು ಬಾರದವರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ನಂತರ ಶೋಧ ಕಾರ್ಯ ನಡೆಸಿದ ಎನ್‍ಡಿಆರ್‍ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ. ಮಕ್ಕಳ ಮೃತದೇಹ ಕಂಡ ಪೆÇೀಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇಬ್ಬರು ಅಪರಿಚಿತ ಉಗ್ರರ ಹತ್ಯೆ

ಶ್ರೀನಗರ, ಡಿ. 19: ಇಲ್ಲಿನ ಶೋಪಿಯಾನ್ ಜಿಲ್ಲೆಯ ವಾನಿಪೆÇರಾದಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಪರಿಚಿತ ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಉಗ್ರರು ಇದ್ದಾರೆಂಬ ಮಾಹಿತಿ ಮೇರೆಗೆ ಭದ್ರತಾ ಪಡೆ ಶೋಪಿಯಾನ್ ಜಿಲ್ಲೆಯ ವಾನಿಪೆÇರಾ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂದರ್ಭ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಉಗ್ರರು ಹತರಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿರುವದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಒಖಿ ಸಂತ್ರಸ್ತ ಕುಟುಂಬಗಳಿಗೆ ಮೋದಿ ಅಭಯ

ಲಕ್ಷದ್ವೀಪ, ಡಿ. 19: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಒಖಿ ಚಂಡಮಾರುತದಿಂದ ಹಾನಿಗೊಳಗಾದ ಲಕ್ಷದ್ವೀಪದ ಕವರಟ್ಟಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ವಿಶ್ವಾಸ ತುಂಬಿದರು. ಇಂದು ಬೆಳಿಗ್ಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ಲಕ್ಷದ್ವೀಪದಲ್ಲಿ ಪ್ರಧಾನಿ ಅವರನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿದರು. ಸ್ವಾಗತ ಕೋರಿದ ಮಕ್ಕಳ ಜತೆ ಮೋದಿ ಕೆಲ ಕಾಲ ಮಾತನಾಡಿದರು. ಬಳಿಕ, ಪ್ರಧಾನಿ ಚಂಡಮಾರುತದಿಂದ ಆಗಿರುವ ಹಾನಿಯ ಕುರಿತು ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿ, ಮಾಹಿತಿ ಪಡೆದರು. ನಂತರ ಚಂಡಮಾರುತದಿಂದ ನಿರಾಶ್ರಿತರಾದ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಲಕ್ಷದ್ವೀಪದಿಂದ ಈಗ ಕೇರಳಕ್ಕೆ ಪ್ರಧಾನಿ ಮೋದಿ ತೆರಳಿದ್ದು, ಅವರನ್ನು ತಿರುವನಂತಪುರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ವಾಗತಿದರು.

ವಿಶೇಷ ನ್ಯಾಯಾಲಯಕ್ಕೆ ಜನಪ್ರತಿನಿಧಿಗಳ ವಿರೋಧ

ನವದೆಹಲಿ, ಡಿ. 19: ಜನಪ್ರತಿನಿಧಿಗಳ ಕ್ರಿಮಿನಲ್ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ಜನಪ್ರತಿನಿಧಿ(ಸಂಸದರು, ಶಾಸಕರು)ಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಆದರೆ ವಿಶೇಷ ಕೋರ್ಟ್ ಸ್ಥಾಪನೆ ಮಾಡುವದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಮರ್ಥಿಸಿಕೊಂಡಿದೆ. 2014 ರಿಂದ ಈಗಾಗಲೇ ಜನಪ್ರತಿನಿಧಿಗಳ ವಿರುದ್ಧ 1,581 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ ವಿಚಾರಣೆ ನಡೆಸಲು ಪ್ರಾರಂಭಿಕ ಹಂತದಲ್ಲಿ 12 ಕೋರ್ಟ್‍ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ತೀರ್ಮಾನದ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಡುವಲ್ಲಿ ಜನಪ್ರತಿನಿಧಿಗಳು ಮುಂದಿರಬೇಕು ಎಂದು ಹೇಳಿದ್ದಾರೆ. ನಾವು ಜನಪ್ರತಿನಿಧಿಗಳು, ನಮ್ಮ ವಿರುದ್ಧದ ಆರೋಪದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿವೆ ಎಂದು ಆರೊಪಿಸಬಹುದು, ನಮ್ಮ ವಿರುದ್ಧ ಆರೋಪ ಕೇಳಿಬಂದಾಗ ತ್ವರಿತ ವಿಚಾರಣೆ ನಡೆಯಬೇಕು ಎಂದು ಜೇಟ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಾಕ್‍ನಲ್ಲಿ 527 ಭಾರತೀಯರು ಬಂಧಿ

ಲಾಹೋರ್, ಡಿ. 19: ಸುಮಾರು 500ಕ್ಕೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಬಹಿರಂಗಗೊಂಡಿದೆ. ಪಾಕಿಸ್ತಾನ ಜೈಲಿನಲ್ಲಿ ಸುಮಾರು 527 ಭಾರತೀಯರು ಸೇರಿದಂತೆ 966 ವಿದೇಶಿಗರು ಬಂಧಿಯಾಗಿದ್ದಾರೆ. ಭಾರತೀಯರ ಪೈಕಿ ಹೆಚ್ಚಿನವರು ಮೀನುಗಾರರಾಗಿದ್ದು ಇನ್ನುಳಿದಂತೆ ಭಯೋತ್ಪಾದನೆ, ಕೊಲೆ, ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಪ್ರವೇಶ ಒಳಗೊಂಡಂತೆ ಹಲವಾರು ಅಪರಾಧಗಳಲ್ಲಿ ಇವರೆಲ್ಲಾ ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯ ಹೇಳಿದೆ. ಅರೇಬಿಯನ್ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಸಮುದ್ರ ಗಡಿ ಉಲ್ಲಂಘಿಸಿ ಪಾಕಿಸ್ತಾನದ ಗಡಿಯೊಳಗೆ ಅಕ್ರಮ ಪ್ರವೇಶಿಸಿದ್ದ ಆರೋಪದ ಮೇಲೆ ಭಾರತೀಯ ಮೀನುಗಾರರು ಬಂಧಿಯಾಗಿದ್ದಾರೆ. ಕಳೆದ ತಿಂಗಳು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ 55 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಇನ್ನುಳಿದಂತೆ ಪಾಕಿಸ್ತಾನದ ಜೈಲಿನಲ್ಲಿ ಸೌದಿ ಹಾಗೂ ಇಬ್ಬರು ಚೀನಾದ ಪ್ರಜೆಗಳು ಶಿಕ್ಷೆ ಅನುಭವಿಸುತ್ತಿದ್ದಾರೆ