ಬೆಂಗಳೂರು, ಡಿ. 13: ಕೊಡಗು-ಚಿಕ್ಕಮಗಳೂರು ‘ಹೋಮ್ ಸ್ಟೇ’ ಅಸೋಸಿಯೇಷನ್ ಮೂಲಕ ಇಂದು ಅಪರಾಹ್ನ ಬೆಂಗಳೂರಿನ ವಿಕಾಸ ಸೌಧದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿತು. ಪ್ರಮುಖವಾಗಿ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಹೋಮ್ ಸ್ಟೇಗಳು ನಿಯಮ ಬಾಹಿರವಾಗಿ ತಲೆ ಎತ್ತುತ್ತಿದ್ದು, ಕಡಿವಾಣ ಹಾಕುವಂತೆ ನಿಯೋಗ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಮಾಡಿತು.

ಜಿಲ್ಲಾ ಮಟ್ಟದ ಎಲ್ಲಾ ಗ್ರಾ.ಪಂ. ಗಳು ‘ಹೋಮ್ ಸ್ಟೇ’ಗೆ ಏಕರೂಪ ತೆರಿಗೆ ವಿಧಿಸಬೇಕು. ಕೆಲವೊಂದು ‘ಹೋಮ್ ಸ್ಟೇ’ಗೆ ಪೊಲೀಸರಿಂದ ಕಿರುಕುಳವಿದೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿಯಿಂದ ಅಧಿಕೃತ ‘ಹೋಮ್ ಸ್ಟೇ’ಗೆ ಪರವಾನಗಿ ನೀಡಲು ನಿಧಾನಗತಿ ಅನುಸರಿಸ ಲಾಗುತ್ತಿದೆ ಎಂದು ನಿಯೋಗದ ಪ್ರಮುಖರು ದೂರಿದರು.

ಕಾಫಿ ಹಾಗೂ ಕಾಳುಮೆಣಸು ದರ ಕುಸಿತದಿಂದಾಗಿ ‘ಹೋಮ್ ಸ್ಟೇ’ ಮೂಲಕ ಲಾಭಾದಾಯಕವಲ್ಲದ ಉದ್ಯಮ ಆರಂಭವಾಗಿದೆ. ಇದಕ್ಕೆ ಜಿಎಸ್‍ಟಿಯಿಂದ ವಿನಾಯಿತಿ ನೀಡಬೇಕು ಎಂದು ಮಾಡಿದ ಮನವಿಗೆ ಸಚಿವ ಪ್ರಿಯಾಂಕ ಖರ್ಗೆ ಅವರು ಶೀಘ್ರದಲ್ಲಿಯೇ ಈ ಬಗ್ಗೆ ಕೇಂದ್ರಕ್ಕೆ ನಿಯೋಗ ತೆರಳಿ ಮನವಿ ಮಾಡೋಣ ಎಂದು ಹೇಳಿದರಲ್ಲದೆ, ಕೊಡಗು - ಚಿಕ್ಕಮಗಳೂರು ‘ಹೋಮ್ ಸ್ಟೇ’ ಪ್ರತ್ಯೇಕ ಸಂಘ, ಪ್ರತ್ಯೇಕ ನಿರ್ಧಾರಗಳಿಂದ ಸರ್ಕಾರ ಮಟ್ಟದಲ್ಲಿ ವ್ಯವಹರಿಸಲು ಕಷ್ಟವಾಗುತ್ತದೆ. ಉಡುಪಿ, ಹಾಸನ, ಸಕಲೇಶಪುರ ಇತರ ಜಿಲ್ಲೆಗಳಲ್ಲಿಯೂ ‘ಹೋಮ್ ಸ್ಟೇ’ ಇದ್ದು, ಒಂದೇ ಸಂಘಟನೆ ಅಸ್ತಿತ್ವಕ್ಕೆ ಬಂದಲ್ಲಿ ಉತ್ತಮ. ಈ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೀವೇ ಸಹಕರಿಸಿ ಎಂದು ಸಚಿವರು ಸಲಹೆ ನೀಡಿದರು.

ಮೈಸೂರು ದಸರಾ ಪ್ರವಾಸೋ ದ್ಯಮದಂತೆ ಕೊಡಗು ದಸರಾ ಹಾಗೂ ಹಾಕಿ ಹಬ್ಬದ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲು ಇಲಾಖೆ ಉತ್ಸುಕವಾಗಿದೆ ಎಂದು ಹೇಳಿದ ಸಚಿವರು, ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಲಿಖಿತವಾಗಿ ಮನವಿ ಮಾಡಿದರೆ ಗೃಹ ಸಚಿವರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.

ಕೆಲವು ರೆಸಾರ್ಟ್‍ಗಳು ‘ಹೋಮ್ ಸ್ಟೇ’ ಹೆಸರಿನಲ್ಲಿ ದಂಧೆ ಮಾಡುತ್ತಿವೆ. ಮಧ್ಯರಾತ್ರಿಯಲ್ಲಿಯೂ ಮೋಜು-ಮಸ್ತಿ, ಡಿಜೆ, ಶಿಬಿರಾಗ್ನಿ ಮೂಲಕ ಪರಿಸರ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಇದಕ್ಕೆ ಕಡಿವಾಣ ಅಗತ್ಯ ಎಂದು ನಿಯೋಗ ದೂರಿತು.

ಮಡಿಕೇರಿಯಲ್ಲಿ ಟ್ಯಾಕ್ಸಿ ಮಾಫಿಯಾದಿಂದಾಗಿ ‘ಹೋಮ್ ಸ್ಟೇ’ ಮಾಲೀಕರು ಹಾಗೂ ಪ್ರವಾಸಿಗಳಿಗೂ ಅನ್ಯಾಯವಾಗುತ್ತಿದೆ ಎಂದು ಸಚಿವರಿಗೆ ದೂರಲಾಯಿತು.

ನೆರೆಯ ಕೇರಳದ ವ್ಯಕ್ತಿಗಳು ಕೆಲವು ಮನೆಗಳನ್ನು ಗುತ್ತಿಗೆಗೆ ಪಡೆದು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವದರಿಂದ ನೋಂದಾಯಿತ ‘ಹೋಮ್ ಸ್ಟೇ’ ಮಾಲೀಕರಿಗೆ ನಷ್ಟ ಉಂಟಾಗುತ್ತಿದೆ ಎಂಬ ಬಗ್ಗೆಯೂ ಸಚಿವರ ಗಮನ ಸೆಳೆಯಲಾಯಿತು.

‘ಕೂರ್ಗ್ ಹೋಂ ಸ್ಟೇ’ ಅಸೋಸಿಯೇಷನ್ ಅಧ್ಯಕ್ಷ ಬಿ.ಸಿ. ಚಂಗಪ್ಪ, ಮಾಜಿ ಅಧ್ಯಕ್ಷರಾದ ಕೆ.ಎಂ. ಕರುಂಬಯ್ಯ, ಮದನ್ ಸೋಮಣ್ಣ, ಮಿಕ್ಕಿ ಕಾಳಪ್ಪ, ಸದಸ್ಯರಾದ ನಿಮ್ಮಿ ಚಂಗಪ್ಪ, ಕ್ಯಾಪ್ಟನ್ ಪರ್ಲ್, ಕರ್ನಲ್ ಭರತ್, ಚಿಕ್ಕಮಗಳೂರು ಜಿಲ್ಲಾ ಹೋಮ್ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಹೆಚ್.ಆರ್. ಉತ್ತಮ್ ಗೌಡ ಹಾಗೂ ನಿರ್ದೇಶಕರು ಇದ್ದರು.

ಜ. 3 ಹಾಗೂ ಜ. 10ರಂದು ಮತ್ತೆ ‘ಹೋಮ್ ಸ್ಟೇ’ಗೆ ಸ್ಪಷ್ಟ ರೂಪು-ರೇಷೆ ನೀಡಲು ಎಲ್ಲ ಮಾಲೀಕರನ್ನು ಕರೆದು ಸಭೆ ನಡೆಸಲು ಪ್ರಿಯಾಂಕ ಖರ್ಗೆ ಅವರು ಇದೇ ಸಂದರ್ಭ ಕಾರ್ಯಕ್ರಮ ನಿಗದಿಗೊಳಿಸಿದರು.

ವರದಿ : ಟಿ.ಎಲ್. ಶ್ರೀನಿವಾಸ್