ಗೋಣಿಕೊಪ್ಪಲು, ಡಿ. 13: ತಾ. 15 ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ಬೆಳಕಿನ ಭಾಗ್ಯ ಎಂಬ ಯೊಜನೆಯಲ್ಲಿ ಕತ್ತಲಿನಿಂದ ಬೆಳಕಿನೆಡೆಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ತಿಳಿಸಿದರು. ವೀರಾಜಪೇಟೆ ಪ್ರವಾಸಿ ಮಂದಿರದಲ್ಲಿ ಆಯೋಜನೆ ಗೊಂಡಿದ್ದ ಪೊನ್ನಂಪೇಟೆ, ವೀರಾಜಪೇಟೆ ಮತ್ತು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇದು ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಸ್ನೈಡರ್ ಸಂಸ್ಥೆ ಮುಂಬೈ ಮತ್ತು ಕ್ರಿಕೆಟ್ ದಂತ ಕಥೆ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಸ್ಪ್ರೆಡಿಂಗ್ ಹ್ಯಾಪಿನೆಸ್ ಫೌಂಡೆಷನ್ ಹಾಗೂ ಪದ್ಮಿನಿ ಪೊನ್ನಪ್ಪ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಮಂತ್ರಿ ರಮಾನಾಥ್ ರೈ, ಉಸ್ತುವಾರಿ ಸಚಿವ ಸೀತಾರಾಂ, ಲೋಕೋಪಯೋಗಿ ಸಚಿವ ಹೆಚ್. ಮಹದೇವಪ್ಪ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಹ್ಯಾಪಿನೆಸ್ ಫೌಂಡೆಷನ್ ಮುಖ್ಯಸ್ಥ ಮುಂಬೈಯ ಕಿಶೋರ್ ಶೆಟ್ಟಿ ಆಗಮಿಸಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ. ಕೊಡಗಿನಲ್ಲಿ ಮೊದಲ ಹಂತದಲ್ಲಿ 1500 ಫಲಾನುಭವಿಗಳಿಗೆ ತಲಾ 5000 ಮೌಲ್ಯದ ಸೋಲಾರ್ ದೀಪಗಳನ್ನು ನೀಡಲಾಗುತ್ತದೆ. ಪ್ರತಿ ಪಂಚಾಯಿತಿಯಿಂದ 25 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ವಾಸವಿದ್ದು, ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಎರಡು ಹಂತದಲ್ಲಿ ಈ ಕಾರ್ಯಕ್ರಮ ಜನತೆಯ ಬಾಗಿಲುಗಳಿಗೆ ತಲಪಿಸಲಾಗುವದು. ಹ್ಯಾಪಿನೆಸ್ ಫೌಂಡೆಷನ್ ಮುಖ್ಯಸ್ಥ ಮುಂಬೈಯ ಕಿಶೋರ್ ಶೆಟ್ಟಿ ಅವರ ವಿಶೇಷ ಕಾಳಜಿಯಿಂದ ಈ ಯೋಜನೆಯನ್ನು ಜಿಲ್ಲೆಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ತರಲು ಸಹಕಾರಿಯಾಗಿದೆ. ಜಿಲ್ಲೆಯು ಗುಡ್ಡಗಾಡು ಪ್ರದೇಶವಾದ ಕಾರಣ ಈ ಕಾರ್ಯಕ್ರಮ ಅನುಷ್ಠಾನ ಗೊಳಿಸುತ್ತಿದ್ದೇವೆ ಎಂದು ಪದ್ಮಿನಿ ಪೊನ್ನಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಾಲಂ, ನಾಪೋಕ್ಲುವಿನ ರಮಾನಾಥ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ, ವೀರಾಜಪೇಟೆಯ ಮುಕ್ಕಾಟಿರ ಕಾವೇರಮ್ಮ, ನಾಪೋಕ್ಲುವಿನ ಅಮೀನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿ.ಎನ್. ಪ್ರಕಾಶ್ ಕಾರ್ಯದರ್ಶಿ ಎ.ಜೆ. ಬಾಬು, ಕಾಡ್ಯಮಾಡ ಚೇತನ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಕಾಂಗ್ರೆಸ್ ವಕ್ತಾರ ಎಂ.ಎಸ್. ಪೂವಯ್ಯ ಜಿ.ಪಂ. ಸದಸ್ಯೆ ಪಿ.ಅರ್. ಪಂಕಜ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಕಾಂಗ್ರೆಸ್ ಮುಖಂಡರಾದ ಅರವಿಂದ್ ಕುಟ್ಟಪ್ಪ, ವಿ.ಕೆ. ಸತೀಶ್, ಮಿದೇರಿರ ನವೀನ್, ಜಾನ್ಸನ್, ಬೋಸ್ ಮಾದಪ್ಪ, ಕಾಡ್ಯಮಾಡ ಬೋಪಣ್ಣ, ಲಾಲಾ ಅಪ್ಪಣ್ಣ, ರಾಮಕೃಷ್ಣ, ವಿಶು, ರಂಜಿ, ಮತ್ರಂಡ ದಿಲ್ಲು ವಿನಯ್ ಕುಮಾರ್, ಜೆ.ಕೆ ಸೋಮಣ್ಣ, ಗೋಪಾಲ ಕೃಷ್ಣ, ಮಾಹದೇವ, ಜಿ.ಸಿ. ಮೋಹನ್, ಶೀಭಾ ಪೃಥ್ವಿನಾಥ್, ವಕೀಲ ಧ್ರ್ರುವ ಕುಮಾರ್ ಮುಂತಾದವರು ಭಾಗವಹಿಸಿದ್ದರು.