ಶ್ರೀಮಂಗಲ, ಡಿ. 13: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಒತ್ತಾಯಿಸಿ 43ನೇ ದಿನದ ಸತ್ಯಾಗ್ರಹದಲ್ಲಿ ಪೊನ್ನಂಪೇಟೆ ಗ್ರಾ.ಪಂ ಮತ್ತು ಶ್ರೀಮಂಗಲ ಗ್ರಾ.ಪಂ. ಜನಪ್ರತಿನಿಧಿಗಳು ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಅವರು, ಪೊನ್ನಂಪೇಟೆ ತಾಲೂಕು ರಚನೆಯಿಂದ ದ.ಕೊಡಗಿನ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗಡಿಪ್ರದೇಶದ ಮತ್ತು ಗ್ರಾಮೀಣ ಭಾಗದ ರೈತರಿಗೆ ತಮ್ಮ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲಾತಿ ಇತರ ಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ. ಆದ್ದರಿಂದ ಬಹುವರ್ಷದ ಈ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳ ಮಾತನಾಡಿ, ಕಳೆದ 43 ದಿನಗಳಿಂದ ದ.ಕೊಡಗಿನ ಬಹುತೇಕ ಸಂಘ-ಸಂಸ್ಥೆ ತಾಲೂಕು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ರಾಜಕೀಯ ರಹಿತ ಹಾಗೂ ಜಾತಿರಹಿತವಾದ ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸುವ ಭರವಸೆ ಇದೆ ಎಂದು ಹೇಳಿದರು.

ಗ್ರಾ.ಪಂ. ಸದಸ್ಯೆ ಕಳಕಂಡ ಸುಮತಿ ಮಾತನಾಡಿ, ವೀರಾಜಪೇಟೆ ತಾಲೂಕು ಕೇಂದ್ರಕ್ಕೆ ದೂರದಿಂದ ದ.ಕೊಡಗಿನ ಜನರು ತೆರಳಿ ಕೆಲಸ ಮಾಡಿಕೊಳ್ಳಬೇಕಾಗಿರುವದರಿಂದ ತಮ್ಮ ಕೆಲಸವನ್ನು ದಲ್ಲಾಳಿಗಳ ಮೂಲಕ ಮಾಡುವಂತಾಗಿದೆ. ಪೊನ್ನಂಪೇಟೆಯಲ್ಲಿಯೇ ತಾಲೂಕು ಕೇಂದ್ರವಾದರೆ ದಲ್ಲಾಳಿಗಳ ಮೊರೆ ಹೋಗುವಂತಹ ಅನಿವಾರ್ಯತೆ ಜನರಿಗೆ ತಪ್ಪುತ್ತದೆ ಎಂದರು.

ತಾಲೂಕು ಹೋರಾಟ ಸಮಿತಿಯ ಪ್ರಮುಖ ಕೋಳೇರ ದಯಾ ಚಂಗಪ್ಪ ಮಾತನಾಡಿ, ಪೊನ್ನಂಪೇಟೆ ತಾಲೂಕು ಹೋರಾಟಕ್ಕೆ ಚುನಾಯಿತ ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಶಾಸಕರು, ಸಂಸದರು ತಾಲೂಕು ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಹಿರಿಯರಾದ ಪುಚ್ಚಿಮಾಡ ಹರೀಶ್ ಮಾತನಾಡಿ, ಪೊನ್ನಂಪೇಟೆ ತಾಲೂಕು ಬೇಡಿಕೆಯ ಬಗ್ಗೆ ಮಾತುಕತೆ ನಡೆಸಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ತಾಲೂಕು ಹೋರಾಟ ಸಮಿತಿ ವತಿಯಿಂದ ಸದ್ಯದಲ್ಲಿಯೇ ಭೇಟಿ ಮಾಡಲಾಗುವದು ಎಂದು ಹೇಳಿದರು.

ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಹಿರಿಯರಾದ ಚೆಟ್ರುಮಾಡ ಶಂಕರು ನಾಚಪ್ಪ, ಗೋಣಿಕೊಪ್ಪ ಎ.ಪಿ.ಎಂ.ಸಿ. ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ, ಬೆಳೆಗಾರ ಒಕ್ಕೂಟದ ತಾಲೂಕು ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಐಪುಮಾಡ ಶಂಭು, ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ಪ್ರಮುಖರಾದ ಚೆಪ್ಪುಡಿರ ಸೋಮಯ್ಯ, ಚೆಪ್ಪುಡಿರ ಪೊನ್ನಪ್ಪ, ಶ್ರೀಮಂಗಲ ಗ್ರಾ.ಪಂ. ಮಾಜಿ ಅದ್ಯಕ್ಷೆ ಬೊಜ್ಜಂಗಡ ಶೈಲಾ ಸುಬ್ರಮಣಿ, ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯ ಅಜ್ಜಮಾಡ ಕುಶಾಲಪ್ಪ ಮಾತನಾಡಿದರು.

ಪ್ರತಿಭಟನೆಯಲ್ಲಿ ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಮೂಕಳೇರ ಕಾವೇರಮ್ಮ, ಕರ್ತಮಾಡ ರಶಿಕ, ಬೊಟ್ಟಂಗಡ ದಶಮಿ, ಕಳಕಂಡ ಸುಮತಿ, ಚೆಪ್ಪುಡಿರ ರೂಪ, ಜಯಲಕ್ಷ್ಮಿ, ಯಶೋಧ, ಅಣ್ಣೀರ ಹರೀಶ್, ಅಡ್ಡಂಡ ಸುನಿಲ್, ಹ್ಯಾರೀಸ್, ರಶೀದ್, ಮೂಕಳೇರ ಲಕ್ಷ್ಮಣ ಮತ್ತು ಹಿರಿಯರಾದ ಕೋಟ್ರಂಗಡ ಬೋಪಯ್ಯ, ಸನ್ನಿ ಸುಬ್ಬಯ್ಯ, ಬಾಪುಟ್ಟಿ ಮತ್ತಿತರರು ಹಾಜರಿದ್ದರು.

ಹೋರಾಟಕ್ಕೆ ಬೆಂಬಲ: ಪೊನ್ನಂಪೇಟೆ ತಾಲೂಕು ಹೋರಾಟ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ತಾ.15ಕ್ಕೆ ಪೊನ್ನಂಪೇಟೆಯ ಶಾಫಿ ಜಮಾ ಮಸೀದಿ, ಕಾಟ್ರಕೊಲ್ಲಿ ಮೊಹಿದ್ದೀನ್ ಜಮಾ ಮಸೀದಿ ಹಾಗೂ ಹಳ್ಳಿಗಟ್ಟಿನ ಭದ್ರಿಯಾ ಜಮಾ ಮಸೀದಿ ಪಾಲ್ಗೊಳ್ಳಲಿದ್ದು, ಅಂದು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಿಂದ ಮೆರವಣಿಗೆಯ ಮೂಲಕ ಆಗಮಿಸಿ ಸತ್ಯಾಗ್ರಹಕ್ಕೆ ಪಾಲ್ಗೊಳ್ಳಲಿದೆ. ತಾ. 18ಕ್ಕೆ ಶ್ರೀಮಂಗಲ ಗ್ರಾ.ಪಂ. ಮತ್ತು ಕೋಟೂರು ಗ್ರಾಮಸ್ಥರು, ತಾ. 19ಕ್ಕೆ ಬಾಡಗರಕೇರಿ ಯಿಂದ ಬೈಕ್ ಜಾಥದ ಮೂಲಕ ಪೊನ್ನಂಪೇಟೆ ತಾಲೂಕು ಬೇಡಿಕೆಗೆ ಬೆಂಬಲಿಸಿ ಹೋರಾಟ ನಡೆಯಲಿದೆ ಎಂದು ತಾಲೂಕು ಹೋರಾಟ ಸಮಿತಿಯ ಪ್ರಕಟಣೆ ತಿಳಿಸಿದೆ.