ಮಡಿಕೇರಿ, ಡಿ. 12: ದೂರವಾಣಿ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬಿಎಸ್‍ಎನ್‍ಎಲ್ ನೌಕರರಿಗೆ 3ನೇ ವೇತನ ಆಯೋಗದ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಇಂದಿನಿಂದ ಜಿಲ್ಲೆಯ ನೌಕರರು ಮುಷ್ಕರ ಆರಂಭಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಗ್ರಾಹಕರ ಸೇವಾ ಕಚೇರಿ ಎದುರು ಜಮಾಯಿಸಿದ ಕೊಡಗಿನ ಬಿಎಸ್‍ಎನ್‍ಎಲ್ ನೌಕರರು ಕೆಲಸ ಕಾರ್ಯ ಮೊಟಕುಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದು, ಕೆಲವರು ಈ ಮುಷ್ಕರದಿಂದ ಹೊರ ಗುಳಿದಿರುವದಾಗಿ ತಿಳಿದುಬಂದಿದೆ.
ದೂರವಾಣಿ ಟವರ್‍ಗಳನ್ನು ಬಿಎಸ್‍ಎನ್‍ಎಲ್‍ನಿಂದ ಪ್ರತ್ಯೇಕಿಸುವದು ಸೇರಿದಂತೆ ತಮ್ಮ ಬೇಕು- ಬೇಡಿಕೆಗಳ ಕುರಿತು ಸರಕಾರ ಸ್ಪಂದಿಸುತ್ತಿಲ್ಲವೆಂದು ಪ್ರತಿಭಟನಾಕಾರರು ಟೀಕಿಸಿದ್ದಾರೆ. ಖಾಸಗೀಕರಣದಿಂದ ಬಿಎಸ್‍ಎನ್‍ಎಲ್ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರ ಬದುಕು ಅತಂತ್ರಗೊಳ್ಳಲಿದೆ ಎಂಬದು ನೌಕರರ ಆತಂಕವೆಂದು ತಿಳಿಸಿದ್ದಾರೆ. ಸಂಘಟನೆ ಒಕ್ಕೂಟಗಳ ಪ್ರಮುಖರಾದ ಜಿ.ಜಿ. ನಾಯಕ್, ಅಂತೋಣಿ, ಕುಶಾಲಪ್ಪ, ಕೃಷ್ಣ, ಪ್ರಕಾಶ್ ಸೇರಿದಂತೆ ನೂರಾರು ಮಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ತಾ. 13ರಂದು (ಇಂದು) ಕೂಡ ಮುಷ್ಕರ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.