ಮಡಿಕೇರಿ, ಡಿ. 12: ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ರಿಜಿಸ್ಟ್ರಾರ್)ರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಡಗು ಮೂಲದವರಾದ ಡಾ. ಕೋಡಿರ ಲೋಕೇಶ್ ಅವರನ್ನು ಸರಕಾರ ದಿಢೀರ್ ಆಗಿ ಬದಲಾವಣೆ ಮಾಡಿರುವ ಬೆಳವಣಿಗೆ ನಡೆದಿದೆ. ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕಾಗಲಿ, ಸಿಂಡಿಕೇಟ್‍ಗಾಗಲಿ ಯಾವದೇ ಮಾಹಿತಿ ಇರಲಿಲ್ಲವೆನ್ನಲಾಗಿದ್ದು, ಗೌಪ್ಯವಾಗಿ ನಡೆದಿರುವ ಈ ಬದಲಾವಣೆಯ ಹಿಂದೆ ಹಲವು ಪ್ರಶ್ನೆ ಹುಟ್ಟಿಕೊಂಡಿರುವದಾಗಿ ತಿಳಿದುಬಂದಿದೆ.
ಲೋಕೇಶ್ ಅವರು ಕಳೆದ ಒಂದೂವರೆ ವರ್ಷದಿಂದ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಅವರನ್ನು ರಿಜಿಸ್ಟ್ರಾರ್ ಪದವಿಗೆ ನೇಮಕ ಮಾಡಲಾಗಿದ್ದು, ಇವರು ಕೊಡವ ಅಧ್ಯಯನಪೀಠದ ಅಧ್ಯಕ್ಷರೂ ಆಗಿದ್ದಾರೆ. ಇವರ ಕೆಲಸ ಕಾರ್ಯದ ಬಗ್ಗೆ ಸಿಂಡಿಕೇಟ್‍ನಲ್ಲೂ ಸದಭಿಪ್ರಾಯವಿದ್ದು, ದಿಢೀರ್ ಬದಲಾವಣೆ ಅಚ್ಚರಿ ಸೃಷ್ಟಿಸಿದೆ. ಇವರನ್ನು ರಿಜಿಸ್ಟ್ರಾರ್ ಸ್ಥಾನದಿಂದ ಈ ಹಿಂದಿನ ಹುದ್ದೆಗೇ ಮರು ನೇಮಕ ಮಾಡಲಾಗಿದ್ದು, ರಿಜಿಸ್ಟ್ರಾರ್ ಸ್ಥಾನಕ್ಕೆ ಬೆಂಗಳೂರಿನ ಯೂನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ನಾಗೇಂದ್ರ ಪ್ರಕಾಶ್ ಅವರನ್ನು ನಿಯೋಜಿಸಲಾಗಿದೆ. ಕೆಲವು ಮೂಲಗಳಿಂದ ನೂತನ ರಿಜಿಸ್ಟ್ರಾರ್ ಉನ್ನತ ಶಿಕ್ಷಣ ಸಚಿವರ ಆಪ್ತವಲಯದವರು ಎಂಬ ಗುಸುಗುಸು ಮಾತು ವಿಶ್ವವಿದ್ಯಾನಿಲಯದಲ್ಲಿ ಕೇಳಿಬರುತ್ತಿದೆ. ಕುಲಪತಿ ಪ್ರೊ. ಕೆ. ಭೈರಪ್ಪ ಅವರು ಕರ್ತವ್ಯ ನಿಮಿತ್ತ ಬೇರೆಡೆಯಿದ್ದಾರೆ. ನಾಗೇಂದ್ರ ಪ್ರಕಾಶ್ ಅವರು ಈಗಾಗಲೇ ಆಗಮಿಸಿ ವರದಿ ಮಾಡಿಕೊಂಡಿದ್ದಾರೆ. ಆದರೆ ಲೋಕೇಶ್ ಅವರು ಇನ್ನೂ ಅಧಿಕಾರ ಹಸ್ತಾಂತರಿಸಿಲ್ಲ ಎಂದು ‘ಶಕ್ತಿ’ಗೆ ತಿಳಿದುಬಂದಿದೆ.