ವೀರಾಜಪೇಟೆ, ಡಿ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಒಂದು ವಾರದಲ್ಲಿ ರಸ್ತೆಗಳ ಗುಂಡಿ ಮುಚ್ಚದಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ನಗರ ಜೆಡಿಎಸ್ ಅಧ್ಯಕ್ಷ ಪಿ.ಎ ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ರಸ್ತೆಗಳೆಲ್ಲವು ಗುಂಡಿಮಯವಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ಅಂದಾಜು 80 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸುಣ್ಣದ ಬೀದಿ ಕಾಂಕ್ರೀಟ್ ರಸ್ತೆಯಲ್ಲಿ ಒಂದು ಅಡಿಕ್ಕಿಂತ ಹೆಚ್ಚು ಆಳದ ಗುಂಡಿ ಬಿದ್ದಿದೆ. ಡಿಸೆಂಬರ್ 29 ರಂದು ನಡೆದ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಡಿಸೆಂಬರ್ 1ರಿಂದ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗುವದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ಬುಧವಾರ ಸಂತೆ ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಫುಟ್‍ಪಾತ್ ಹಾಗೂ ವಾಹನಗಳಲ್ಲಿ ಹಣ್ಣು ಹಂಪಲು ಮಾರಾಟ ಮಾಡುವ ಬೀದಿ ವ್ಯಾಪಾರಿಗಳಿಗೆ ಅವಕಾಶವಿಲ್ಲ. ಅವರಿಗೆ ತಾಲೂಕು ಮೈದಾನದಲ್ಲಿ ಅವಕಾಶ ಮಾಡಲಾಗುವದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಪಂಚಾಯಿತಿಯ ನಿರ್ಣಯಗಳಿಗೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಟಿ.ಆರ್ ಹರ್ಷ ಮಾತನಾಡಿ ಪಟ್ಟಣದಲ್ಲಿ ಮಿನಿ ವಿಧಾನ ಸೌದ ನಿರ್ಮಾಣ ಕಾರ್ಯ ಪ್ರಾರಂಭ ಗೊಂಡು 8 ವರ್ಷ ಕಳೆದಿದೆ. ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಧಿಕಾರಿ ಹಾಗೂ ಸಿಬ್ಬಂದಿಗಳಿಗಿಂತ ದಲ್ಲಾಳಿಗಳೆ ಹೆಚ್ಚಾಗಿದ್ದಾರೆ. ತಹಶೀಲ್ದಾರ್ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ಗೋಷ್ಠಿಯಲ್ಲಿ ನಗರ ಯುವ ಘಟಕದ ಅಧ್ಯಕ್ಷ ಚಿಲ್ಲವಂಡ ಗಣಪತಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಕಿಬ್, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಫಾಸಿಲ್ ಉಪಸ್ಥಿತರಿದ್ದರು.