ಸಿದ್ದಾಪುರ, ಡಿ. 11: ಇಲ್ಲಿನ ಸಿದ್ದಾಪುರ ಪ್ರೌಢಶಾಲೆ ಆರಂಭವಾಗಿ 50 ವರ್ಷಗಳು ಕಳೆದಿದ್ದು, ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶಾಲೆ ಸಜ್ಜಾಗಿದೆ.

1967ರಲ್ಲಿ ಆರಂಭವಾÀದ ಸಿದ್ದಾಪುರ ಪ್ರೌಢಶಾಲೆಯು ಸಿದ್ದಾಪುರ ಸುತ್ತಮುತ್ತಲಿನ ಮೊದಲ ಪ್ರೌಢಶಾಲೆಯಾಗಿದೆ. 1967ರಲ್ಲಿ ಸಿದ್ದಾಪುರಕ್ಕೆ ಒಂದು ಪ್ರೌಢಶಾಲೆ ಬೇಕೆಂಬ ಅಭಿಪ್ರಾಯದಂತೆ ಅಂದಿನ ಪಂಚಾಯಿತಿ ಸಭೆಯಲ್ಲಿ ಚರ್ಚಿಸ ಲಾಗಿ, ಬಳಿಕ ಶಾಲೆ ಆರಂಭಿಸಲು ಸಮಿತಿಯನ್ನು ರಚಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಬಳಿಕ ಗ್ರಾಮದ ಹಿರಿಯರಾಗಿದ್ದ ನಡಿಕೇರಿಯಂಡ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಸಭೆ ನಡೆಸಿ, ಸಮಿತಿಯನ್ನು ರಚಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಮೊದಲ ಅಧ್ಯಕ್ಷರಾಗಿ ತೋಟಂಬೈಲು ಮಾದಪ್ಪ ಅವರನ್ನು ಹಾಗೂ ಗೌರವ ಕಾರ್ಯದರ್ಶಿಯಾಗಿ ಎಂ.ಸಿ. ಸುಬ್ಬಯ್ಯ ಅವರನ್ನು ಸರ್ವಾನು ಮತದಿಂದ ಆಯ್ಕೆಗೊಳಿಸಲಾಯಿತು. ಇದೇ ಸಂದರ್ಭ ಸಮಿತಿ ಸದಸ್ಯರಾಗಿ ಎಂ.ಸಿ ಸುಬ್ಬಯ್ಯ, ಎಂ.ಸಿ ಸೋಮಯ್ಯ ಹಾಗೂ ಕೆ.ಆರ್ ದೇವಯ್ಯ ಅವರನ್ನು ಕೂಡ ಆಯ್ಕೆಗೊಳಿಸಲಾಯಿತು.

ಶಾಲೆ ಆರಂಭಿಸಲು ಶಿಕ್ಷಣ ಇಲಾಖೆಗೆ ರೂ 5 ಸಾವಿರ ಠೇವಣಿ ಇಡಬೇಕಾಗಿತ್ತು. ಸಮಿತಿ ಸದಸ್ಯರು ಹಾಗೂ ಹಿರಿಯರು, ದಾನಿಗಳಿಂದ ಠೇವಣಿ ಹಣಕ್ಕಾಗಿ ಒಟ್ಟು 5037 ರೂ ಸಂಗ್ರಹಿಸಿ, ರೂ 5 ಸಾವಿರವನ್ನು ಶಿಕ್ಷಣ ಇಲಾಖೆಗೆ ಠೇವಣಿ ನೀಡಿ, ಶಾಲೆ ಆರಂಭಿಸಲು ಅನುಮತಿ ಪಡೆಯಲಾಯಿತು.

ಶಾಲೆಗೆ ಅನುಮತಿ ದೊರೆತರು ಕಟ್ಟಡದ ಅಭಾವ ಕಾಡಿತು. ಇದೇ ಸಂದರ್ಭ ಗುಹ್ಯ ಅಗಸ್ತ್ಯೇಶ್ವರ ಸೇವಾ ಸಹಕಾರ ಸಂಘದ ಕಟ್ಟಡದಲ್ಲಿ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಶಾಲೆಯನ್ನು ಪ್ರಾರಂಭಿಸಲಾಯಿತು. 1967-68 ನೇ ವರ್ಷದ ಜೂನ್ 1 ರಂದು ಸಿದ್ದಾಪುರ ಪ್ರೌಢಶಾಲೆಯು ಆರಂಭಗೊಂಡು, ಮೊದಲ ವರ್ಷದಲ್ಲಿ 18 ವಿದ್ಯಾರ್ಥಿನಿಯರು ಹಾಗೂ 31 ವಿದ್ಯಾರ್ಥಿಗಳು ದಾಖಲಾಗಿದ್ದರು. 1967-68 ನೇ ಸಾಲಿನ ಮುಖ್ಯೋಪಾದ್ಯಾಯರಾಗಿ ಕೆ.ಕೆ. ಸೋಮಯ್ಯ, ಸಹಾಯಕ ಅಧ್ಯಾಪಕರಾಗಿ ಎಂ.ಕೆ. ಪೂಣಚ್ಚ, ಹಿಂದಿ ಅಧ್ಯಾಪಕರಾಗಿ ಮುತ್ತಮ್ಮ ಸೇವೆ ಸಲ್ಲಿಸಿದರು. ಬಳಿಕ ದಾನಿಗಳ ಸಹಕಾರದಿಂದ ಈಗಿನ ಪ್ರೌಢಶಾಲೆಯ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ, ಶಾಲೆಯನ್ನು ಈಗಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

1975ರಲ್ಲಿ ಸಿದ್ದಾಪುರ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆಗಾಗಿ ಅಂದಿನ ಜನರಲ್ ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರು ಶಾಲೆಗೆ ಆಗಮಿಸಿದ್ದರು.

1997-98 ನೇ ಸಾಲಿನಲ್ಲಿ ಸಿದ್ದಾಪುರ ಪ್ರೌಢಶಾಲೆಯಲ್ಲಿ ನೂತನ ಪದವಿಪೂರ್ವ ಕಾಲೇಜು ಆರಂಭವಾಗಿ ಶಾಲೆಯು ಮೇಲ್ದರ್ಜೆಗೆ ಏರಿದ್ದು, ಬಳಿಕ ಸಿದ್ದಾಪುರ ಸಂಯುಕ್ತ ಪದವಿಪೂರ್ವ ಕಾಲೇಜಾಗಿ ಮಾರ್ಪಟ್ಟಿತ್ತು. ಇದೀಗ ಸಿದ್ದಾಪುರ ಪ್ರೌಢಶಾಲೆಯನ್ನು ರಾಜ್ಯದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ತನ್ನ ಅಧೀನಕ್ಕೆ ಪಡೆದು ನಡೆಸಿಕೊಂಡು ಬರುತ್ತಿದೆ.

-ವಾಸು ಸಿದ್ದಾಪುರ