ಸೋಮವಾರಪೇಟೆ, ಡಿ.11: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಯ ರಾಜೀವ್‍ಗಾಂಧಿ ಸೇವಾಕೇಂದ್ರದ ಕಾಮಗಾರಿ ಕಳಪೆಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆಗೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಮಾನವ ಹಕ್ಕುಗಳು ಹಾಗು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಟಿ.ಜೆ.ಗಣೇಶ್ ಕುಮಾರ್, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಶಿಥಿಲಗೊಂಡಿರುವ ಬಗ್ಗೆ 11.8.2016ರಂದು ಜಿಲ್ಲಾಧಿಕಾರಿಗಳು ಹಾಗು ಜಿ.ಪಂ. ಸಿ.ಇ.ಒ ಅವರಿಗೂ ದೂರು ನೀಡಲಾಗಿತ್ತು. ಆದರೆ ಅಕ್ರಮ ಎಸಗಿದವರ ವಿರುದ್ಧ ಇದುವರೆಗೆ ತನಿಖೆ ಕೈಗೊಂಡಿಲ್ಲ. ಇನ್ನು ಹದಿನೈದು ದಿನಗಳ ಒಳಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿಯಿರುವದರಿಂದ ಕೊಡಗಿನಲ್ಲಿ ಪಂಚಾಯತ್ ರಾಜ್ ಆಡಳಿತ ನಿಷ್ಕ್ರಿಯವಾಗಿದೆ. ಕೂಡಲೇ ಸರ್ಕಾರ ಹುದ್ದೆಯನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

ಸೋಮವಾರಪೇಟೆ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ, ಅನೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲಗಳು ಮಾರಾಟವಾಗುತ್ತಿದೆ. ಆದರೆ ಪಟ್ಟಣ ಪಂಚಾಯಿತಿ ಕ್ರಮಕೈಗೊಳ್ಳುತ್ತಿಲ್ಲ. ಕಳಪೆ ಕಾಮಗಾರಿಯಿಂದ ಪಟ್ಟಣದ ಹೈಟೆಕ್ ಮಾರುಕಟ್ಟೆ ಮಳೆಗಾಲದಲ್ಲಿ ಸೋರುತ್ತಿದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಂಡಿಲ್ಲ. ಕಸದ ವಿಲೇವಾರಿ ಸಮರ್ಪಕವಿಲ್ಲದ ಕಾರಣ ಪಟ್ಟಣದ ಕೆಲ ವಾರ್ಡ್‍ಗಳು ಗಬ್ಬೆದ್ದು ನಾರುತ್ತಿವೆ ಎಂದು ಆರೋಪಿಸಿದರು.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಹಿರಿಯ ಅಧಿಕಾರಿಯ ಸೂಚನೆಯಂತೆ, ಸಿಬ್ಬಂದಿಯೋರ್ವ ಆಶ್ರಯ ಯೋಜನೆಯ ಫಲಾನುಭವಿಗಳನ್ನು ಶೋಷಣೆ ಮಾಡುತ್ತಿದ್ದಾನೆ. ಅರ್ಜಿ ತಂದ ತಕ್ಷಣ ಲಂಚಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಒಬ್ಬೊಬ್ಬ ಫಲಾನುಭವಿಯಿಂದ 25 ಸಾವಿರ ರೂ.ಗಳನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ. ಪಂಚಾಯಿತಿಯಲ್ಲೂ ಅರ್ಜಿ ವಿಲೇವಾರಿಗೆ ಹಣ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನಿಯಮ ಉಲ್ಲಂಘಿಸಿ ಆಶ್ರಯ ಮನೆಗಳನ್ನು ವಿತರಿಸಲಾಗಿದೆ. ಈ ದಂಧೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ರಾಜ್ಯ ಸಮಿತಿ ಸದಸ್ಯ ಎನ್.ಎನ್.ಪ್ರಸನ್ನ ಕುಮಾರ್ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ತಾಲೂಕು ಅಧ್ಯಕ್ಷ ಪಿ.ಮಧು, ರಾಜ್ಯ ಕಾರ್ಯದರ್ಶಿ ಎಂ.ಪಿ.ರಮೇಶ್, ಟ್ರೇಡ್ ವಿಭಾಗದ ರಾಜ್ಯ ಕಾರ್ಯದರ್ಶಿ ಕೆ.ಬಿ.ಸೂಫಿ ಉಪಸ್ಥಿತರಿದ್ದರು.