ಶ್ರೀಮಂಗಲ, ಡಿ. 11: ಪೊನ್ನಂಪೇಟೆ ತಾಲೂಕು ಪುನರ್‍ರಚನೆಗೆ ಆಗ್ರಹಿಸಿ, 41ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಕೋಣನಕಟ್ಟೆಯ ಸಾಧನಾ ಲೇಡೀಸ್ ಅಸೋಸಿಯೇಷನ್, ಟಿ.ಶೆಟ್ಟಿಗೇರಿ ಗ್ರಾ.ಪಂ., ಮತ್ತು ಟಿ.ಶೆಟ್ಟಿಗೇರಿ ಗ್ರಾಮಸ್ಥರು ಮತ್ತು ತಾವಳಗೇರಿಯ ಕೈಬಿಲೀರ ಕುಟುಂಬದವರು ಬೆಂಬಲ ನೀಡಿ ಭಾಗವಹಿಸಿದರು.ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಗೆ ಈ ಸಂಘ ಸಂಸ್ಥೆಯವರು ಪೊನ್ನಂಪೇಟೆ ಪಟ್ಟಣದಿಂದ ತಮ್ಮ ಬ್ಯಾನರ್‍ನೊಂದಿಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಆಗಮಿಸಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಇದಕ್ಕೂ ಮೊದಲು ಪೊನ್ನಂಪೇಟೆ, ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ಮಾಡಿದ ಪ್ರತಿಭಟನಾಕಾರರು ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಮಾತನಾಡಿದ ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅವರು, ಈಗಾಗಲೇ ರಾಜ್ಯ ಸರ್ಕಾರ 4 ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಿ ರಾಜ್ಯದಲ್ಲಿ ತಾಲೂಕು ರಚನೆ ಮಾಡುವ ಬಗ್ಗೆ ವರದಿ ಸಲ್ಲಿಸಲು ಸೂಚಿಸಿತ್ತು. ಆದರೆ ಅದ್ಯಾವ ಸಮಿತಿಯು ಪೊನ್ನಂಪೇಟೆಯನ್ನು ತಾಲೂಕ್ಕಾಗಿ ಮಾಡಲು ಪರಿಗಣನೆಗೆ ತೆಗೆದುಕೊಂಡಿಲ್ಲ. ಈಗಾಗಲೆ 50 ತಾಲೂಕು ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇದರಲ್ಲಿ 5 ತಾಲೂಕನ್ನು ರಚನೆ ಮಾಡುವ ಬಗ್ಗೆ ಯಾರು ಹೇಳಿರಲಿಲ್ಲ. ಕೆಲವು ಹೋಬಳಿಯನ್ನೆ ತಾಲೂಕ್ಕಾಗಿ ಘೋಷಣೆ ಮಾಡಲಾಗಿದೆ. ಆದರೆ ಕಳೆದ 17 ವರ್ಷದಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಹೋರಾಟ ನಡೆಸುತ್ತಿದ್ದರೂ ರಾಜ್ಯದಲ್ಲಿ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ಕೊಡಗನ್ನು ಕಡೆಗಣಿಸಿವೆ ಎಂದು ದೂರಿದರು.

ಟಿ.ಶೆಟ್ಟಿಗೇರಿ ಗ್ರಾ.ಪಂ. ಅದ್ಯಕ್ಷ ಮಚ್ಚಮಾಡ ಸುಮಂತ್ ಮಾತನಾಡಿ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಗೆ ಸೇರುವ 21 ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಜನರು ಸೇರಿ ತಾಲೂಕು ರಚನೆ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದರು.

ಕೈಬಿಲೀರ ಕುಟುಂಬದ ಅಧ್ಯಕ್ಷರಾದ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿ, ಮುಖ್ಯಮಂತ್ರಿಗಳಿಗೆ ತಾಲೂಕು ಬೇಡಿಕೆಯ ಬಗ್ಗೆ ಈಗಾಗಲೆ ಹೋರಾಟ ಸಮಿತಿ ಮನವರಿಕೆ ಮಾಡಿದ್ದು, ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಅವರಿಗೆ ಈ ವ್ಯಾಪ್ತಿಯ ಎಲ್ಲಾ ಜನರು ಮತ್ತು ಪಕ್ಷದ ಮುಖಂಡರು ಸೇರಿ ಮತ್ತಷ್ಟು ಒತ್ತಡ ಹೇರಿ ತಾಲೂಕು ರಚನೆಗೆ ಆಗ್ರಹಿಸಬೇಕಾಗಿದೆ ಎಂದು ಹೇಳಿದರು.

ತಾಲೂಕು ಹೋರಾಟ ಸಮಿತಿಯ ಮುಖಂಡ ಕೋಳೇರ ದಯಾ ಚಂಗಪ್ಪ ಮಾತನಾಡಿ, 41 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಮತ್ತು ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಪೊನ್ನಂಪೇಟೆ ತಾಲೂಕು ವ್ಯಾಪ್ತಿಗೆ ಸೇರುವ ಮುಖಂಡರು ಮತ್ತು ಜನಪ್ರತಿನಿಧಿಗಳು ಮಾತ್ರ ಬೆಂಬಲ ವ್ಯಕ್ತಪಡಿಸಿದ್ದು, ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು ಮತ್ತು ಜನಪ್ರತಿನಿಧಿಗಳು ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.

ಸಾಧನಾ ಲೇಡೀಸ್ ಅಸೋಸಿಯೇಷನ್‍ನ ಅಧ್ಯಕ್ಷೆ ಕಾಂಡೇರ ರೂಪ ಕುಮಾರ್ ಮಾತನಾಡಿ, ಸರ್ಕಾರಕ್ಕೆ ಯಾವದೇ ಹೊರೆಯಾಗದ ಪೊನ್ನಂಪೇಟೆ ತಾಲೂಕನ್ನು ಜನರ ಅನುಕೂಲಕ್ಕಾಗಿ ರಚನೆ ಮಾಡಬೇಕು. ಈಗಿರುವ ವೀರಾಜಪೇಟೆ ತಾಲೂಕು ಕೇಂದ್ರ ದ.ಕೊಡಗಿನ ಜನರಿಗೆ ದೂರವಾಗಿದ್ದು, ತೊಂದರೆ ಉಂಟಾಗುತ್ತಿದೆ ಎಂದು ಹೇಳಿದ ಅವರು, ತಾಲೂಕು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವದಾಗಿ ಘೋಷಿಸಿದರು. ಪ್ರತಿಭಟನೆಯಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಹಿರಿಯರಾದ ಕಾಟಿಮಾಡ ಜಮ್ಮಿ ಅಯ್ಯಣ್ಣ ಮಾತನಾಡಿದರು.

ಪ್ರತಿಭಟನೆಯಲ್ಲಿ ಟಿ.ಶೆಟ್ಟಿಗೇರಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅದ್ಯಕ್ಷ ಕಟ್ಟೇರ ಈಶ್ವರ, ಮಾಣೀರ ಉಮೇಶ್, ತಡಿಯಂಗಡ ಕರುಂಬಯ್ಯ, ಚೆಟ್ಟಂಗಡ ರಂಜು ಕರುಂಬಯ್ಯ, ವಕೀಲರ ಸಂಘದ ಎಂ.ಟಿ. ಕಾರ್ಯಪ್ಪ, ಜಿಲ್ಲಾ ವಕ್ಫ್ ಮಂಡಳಿಯ ಎರ್ಮು ಹಾಜಿ, ಸಾಧನಾ ಲೇಡೀಸ್ ಅಸೋಸಿಯೇಷನ್‍ನ ಉಪಾಧ್ಯಕ್ಷ ಪುಳ್ಳಂಗಡ ರೀನಾ ದಿನೇಶ್, ಕಾರ್ಯದರ್ಶಿ ಕಾಂಡೇರ ಹೇಮಾ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಭಾನುವಾರ ನಡೆದ ತಾಲೂಕು ಹೋರಾಟದಲ್ಲಿ ಪೊನ್ನಂಪೇಟೆಯ ಸಂಥ ಅಂತೋಣಿ ಚರ್ಚ್‍ನ ಧರ್ಮಗುರು ಜೆ. ಕೊಲ್ಲನೂರ್, ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಧ್ಯಕ್ಷ ಸುನಿಲ್, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ, ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ವಾಂಚೀರ ಕೆಂಪರಾಜು, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ನಾಚಪ್ಪ, ಹಿರಿಯರಾದ ಚೆಪ್ಪುಡಿರ ಹ್ಯಾರಿ ದೇವಯ್ಯ, ಪುಚ್ಚಿಮಾಡ ಹರೀಶ್, ಕಿರಿಯಮಾಡ ಭೀಮಯ್ಯ, ಪೆಮ್ಮಂಡ ಅಪ್ಪಯ್ಯ, ನವಜ್ಯೋತಿ ಸಂಗ ಮತ್ತು ವೆಲ್‍ಫೇರ್ ಪಾರ್ಟಿ ಇಂಡಿಯಾ ಸದಸ್ಯರು ಸೆಂಟ್ ಆಂಟೋನಿ ಶಿಕ್ಷಣ ಸಂಸ್ಥೆಯ ಶಿಕ್ಷಕರು ಪಾಲ್ಗೊಂಡಿದ್ದರು.