ಮಡಿಕೇರಿ ಡಿ.11 : ಇತ್ತೀಚೆಗೆ ಮೇಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ಶಿಷ್ಟಾಚಾರವನ್ನು ಉಲ್ಲಂಘಿಸ ಲಾಗಿದೆ ಎಂದು ಆರೋಪಿಸಿರುವ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಬಿಜೆಪಿ ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಾಂತಕಾವೇರಪ್ಪ, ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನ ಅನುದಾನದಡಿ ಕಾಮಗಾರಿಯನ್ನು ಆರಂಭಿಸುವ ಸಂದರ್ಭ ಗ್ರಾ.ಪಂ ಪ್ರತಿನಿಧಿಗಳನ್ನು ಹಾಗೂ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಶಿಷ್ಟಾಚಾರ ವನ್ನು ಉಲ್ಲಂಘಿಸಿರುವ ಬಗ್ಗೆ ವಿಧಾನ ಪರಿಷತ್ ಸಭಾಪತಿಗಳಾದ ಡಿ.ಹೆಚ್. ಶಂಕರ ಮೂರ್ತಿ ಅವರಿಗೆ ದೂರು ನೀಡುವದಾಗಿ ತಿಳಿಸಿದರು. ವೀಣಾ ಅಚ್ಚಯ್ಯ ಅವರು 2010ರ ಶಿಷ್ಟಾಚಾರದ ನಿಯಮವನ್ನು ಉಲ್ಲಾಂಘಿಸಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು. ಜಿ.ಪಂ ಅಧ್ಯಕ್ಷರು ಹಾಗೂ ತಾ.ಪಂ ಪ್ರತಿನಿಧಿಗಳನ್ನು ಕೂಡ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾ.ಪಂ ಸದಸ್ಯ ಎಂ.ಕೆ.ನಾಚಪ್ಪ ಮಾತನಾಡಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವದು ಸ್ವಾಗತಾರ್ಹ, ಆದರೆ ನಿಯಮವನ್ನು ಉಲ್ಲಂಘಿಸಿ ರುವದು ಖಂಡನೀಯ ವೆಂದರು. ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಆರಂಭಿಸ ಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ತಾ.ಪಂ ಸದಸ್ಯೆ ಟಿ.ಆರ್.ಕುಮುದಾ ಮಾತನಾಡಿ ಮೇಕೇರಿ-ಅರ್ವತ್ತೊಕ್ಲು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಿಧಾನ ಪರಿಷತ್ ಸದಸ್ಯರು ಈ ರಸ್ತೆಯ ಬಗ್ಗೆಯೂ ಕಾಳಜಿ ತೋರಲಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಕೆ.ಕೆ.ಜಯಂತಿ, ಉಪಾಧ್ಯಕ್ಷ ಕೆ.ಎಸ್.ತಿಮ್ಮಯ್ಯ ಹಾಗೂ ಸದಸ್ಯರಾದ ಪಿ.ಯು.ರಕ್ಷಿತ್ ಉಪಸ್ಥಿತರಿದ್ದರು.