ಮಡಿಕೇರಿ, ಡಿ.11 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪೈಪೋಟಿಯ ಜೀವನದ ಸವಾಲುಗಳನ್ನು ಎದುರಿಸುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಪೊಲೀಸ್ ಉಪ ಅಧೀಕ್ಷಕರಾದ ಸುಂದರರಾಜ್ ಕಿವಿಮಾತು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ 2016-17ನೇ ಸಾಲಿನ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಡಿವೈಎಸ್‍ಪಿ ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ಬೆಂಬಲವನ್ನು ನೀಡಿ ಉನ್ನತ ಮಟ್ಟದ ಹುದ್ದೆಗೇರಲು ಸ್ಫೂರ್ತಿ ತುಂಬಬೇಕೆಂದು ಸುಂದರ್‍ರಾಜ್ ಸಲಹೆ ನೀಡಿದರು.

ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷರಾದ ಡಾ. ವಿ.ಎಸ್.ಸತೀಶ್ ಮಾತನಾಡಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಇಂದು ಡಾ.ಅಂಬೇಡ್ಕರ್ ಅವರ ನಿರೀಕ್ಷೆಗಳು ಹುಸಿಯಾಗುತ್ತಿದ್ದು, ದಲಿತ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕಾಗಿದೆ ಎಂದರು.

ನಗರಸಭಾ ಪೌರಾಯುಕ್ತರಾದ ಬಿ.ಶುಭ ಮಾತನಾಡಿ ಪ್ರತಿಯೊಂದು ಸಂದರ್ಭದಲ್ಲೂ ಎಲ್ಲಾ ಸಮುದಾಯದ ಜನ ಒಂದಲ್ಲಾ ಒಂದು ರೀತಿಯಲ್ಲಿ ತುಳಿತಕ್ಕೆ ಒಳಗಾಗುತ್ತಾರೆ. ಈ ರೀತಿಯ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ಪ್ರತಿಯೊಬ್ಬರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು.

ಜಿಲ್ಲಾ ಆಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿಗಳಾದ ಡಾ. ಹೆಚ್.ವಿ.ದೇವದಾಸ್ ಮಾತನಾಡಿ ಶಿಕ್ಷಣ ಎನ್ನುವದು ಪ್ರತಿಯೊಬ್ಬರ ಜೀವನದ ಭದ್ರತೆಯಾಗಿದ್ದು, ಶಿಕ್ಷಣದ ಮೂಲಕವೇ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕೆಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್. ದಿವಾಕರ್ ಮಾತನಾಡಿ, ಕಳೆದ 27 ವರ್ಷಗಳಿಂದ ಸಮಿತಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಅಭ್ಯುದಯವನ್ನು ಸಾಧಿಸುವಂತೆ ಸ್ಫೂರ್ತಿ ತುಂಬಲಾಗುವದೆಂದರು.

ಸಾಧಕರಿಗೆ ಸನ್ಮಾನ

ಕೆಎಎಸ್ ಪದವಿ ಪಡೆದು ಉನ್ನತ ಅಧಿಕಾರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್ ಹಾಗೂ 2016-17 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಅಂಕ ಪಡೆದ ದಲಿತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಶ್ರೀರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿಗಳಾದ ಹೆಚ್.ಎಸ್. ಗೋವಿಂದಸ್ವಾಮಿ, ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ದಾನಿಗಳಾದ ಟಿ.ಆರ್.ವಾಸುದೇವ್, ವ್ಯಾಂಡಮ್ ಎಂಟರ್ ಪ್ರೈಸಸ್‍ನ ಮಾಲೀಕ ಕೆ.ಕೆ. ದಾಮೋದರ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.